Monday, November 16, 2020

ಈ ಸಂಜೆ...

ಚಿತ್ರಕ್ಕೆ ಪದ್ಯ-೫೩

ಗಿಡ-ಮರ, ಅಂಬರದ ಬಿಂಬವ

ಪ್ರತಿಬಿಂಬಿಸಿತು ತಿಳಿ ನೀರು.

ತಿಳಿ ನೀರನ್ನು ಕದಡಿದಾಗ ನಾನು

ಪ್ರತಿಬಿಂಬವಾಯಿತು ನುಚ್ಚು ನೂರು. 


ಪ್ರತಿಬಿಂಬ ಮರುಕಳಿಸಿದಾಗ

ನಗುವಿನ ಕಾಂತಿಯು ಕಣ್ತುಂಬ.

ನಾ ಕಣ್ತುಂಬಿಕೊಂಡ ಕಾಂತಿಯ

ತೋರಿಸಿತು ಎನ್ನಯ ಪ್ರತಿಬಿಂಬ.


ಮೋಡಗಳ್ಹಿಂದೆ ರವಿ ಮಲಗಿದಾಗ

ಮೆಲ್ಲನೆ ಶಶಿಯು ಉದಯಿಸಿದ.

ಶಶಿಯು ಬಂದು ಸಂಜೆಯ ಅಳಿಸಿ

ಬೆಳಕಿನ ನಕ್ಷತ್ರಗಳೊಡನೆ ಸೇರಿದ.


ಈ ಸುಮಧುರ ಸಂಜೆಯ ಅತ್ಯದ್ಭುತ

ವೀಕ್ಷಣೆಯನ್ನು ಸೆರೆಹಿಡಿದ ನಾ ಧನ್ಯ.

ಮರುಕ್ಷಣವೇ ಸತ್ತರೂ, ಈ ಸಂಜೆಗೋಸ್ಕರ

ಮರಳಿ ಜನಿಸುವುದು ಎನ್ನ ಜೀವ.

           ----ಚಿನ್ಮಯಿ

Saturday, November 14, 2020

ನೆರವಾಗು

ಚಿತ್ರಕ್ಕೆ ಪದ್ಯ- ೫೨


ನೀ ನೆರವಾಗಿ

ನೊಂದ ಜೀವಕ್ಕೆ,

ನಗುತಲೇ ಬೆಳಗಿಸು

ಆರಿದ ಹಣತೆಯ.

ಕಷ್ಟದಲ್ಲಿರುವ ಕೈಗಳ

ಹಿಡಿದು ಮುನ್ನಡೆಸಿ,

ಜೀನನಾಗದೆ ನೀ

ಚೆಲ್ಲು ಮಮತೆಯ.


ನೀ ನೆರವಾಗಿ

ನಿಂತು ಹಿಮ್ಮೆಟ್ಟದೆ,

ಬೆಳಸಿ ಬೆಳಗಿಸು

ಕುಗ್ಗಿರುವ ಜೀವನವ.

ಅಸೂಯೆಯ ನೀ

ಕೊಂಚವು ತೋರದೆ,

ಮತ್ತೊಬ್ಬರ ನಗುವಿಗೆ

ಕಾರಣವಾಗೋ ಮಾನವ.


ನೀ ನೆರವಾದರೆ

ಮಾನವ ಕುಲಕ್ಕೆ,

ಮಾನವೀಯತೆಯಿಂದ

ನಿನ್ನ ಬಾಳು ವಿಫುಲ.

ಹೊಡೆದ ಮನಸ್ಸುಗಳ

ಮತ್ತೊಮ್ಮೆ ಕೂಡಿಸಿ,

ಬದುಕನ್ನು ಮಾಡು

ಇನ್ನೂ ಕೊಂಚ ಸರಳ.

        ----ಚಿನ್ಮಯಿ

Tuesday, November 10, 2020

ಈಗಿನ ಹಾಗು ಮುಂದಿನ ತಲೆಮಾರುಗಳಿಗೊಂದು ತುಸು ಕಿವಿ ಮಾತು.

ತಲೆಮಾರುಗಳು ಉರುಳಿದಂತೆ ಜನರ ಅಭಿರುಚಿ ಬದಲಾಗುತ್ತಿರುವುದು ಹಾಗು ಓದುಗರ, ಕೇಳುಗರ ಸಂಖ್ಯೆಯು ಪತನವಾಗುತ್ತಿರುವುದು ತೀರ ದುಃಖದ ವಿಷಯವಾಗಿದೆ.

ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಒಬ್ಬರು ಸಹ ಓದುಗರು, ಕೇಳುಗರು ದೊರಕದೆ 'ಡಿಜಿಟಲ್' ಹಾಗು 'ಎಲೆಕ್ಟ್ರಾನಿಕ್ಸ್' ಪ್ರಪಂಚ ಎಂಬ ಜಾಲದಲ್ಲಿ ಸಿಲುಕಿ ಕೊಳೆತು ನಾರುವುದಂತು ಖಚಿತವಾಗಿದೆ. ಇನ್ನಾದರು ಹೆಚ್ಚೆತ್ತು ಆದಷ್ಟು ಸಮಯ ಪುಸ್ತಕಗಳನ್ನು ಓದವುದರಲ್ಲಿ, ಹಳೆಯ ಹಾಡುಗಳನ್ನು ಕೇಳುವುದರಲ್ಲಿ ಕಳೆಯಬೇಕೆಂದು ವಿನಂತಿಸುತ್ತೇನೆ. ಹಾಗೆಯೇ ವಿವಿಧ ಸ್ಥಳಗಳನ್ನು ಸುತ್ತಿ ವಿವಿಧ ಜನಗಳ ಪರಿಚಯ ಮಾಡಿಕೊಂಡು ಬದುಕಿನ ನಿಜವಾದ ಸಾರವನ್ನು ಅನುಭವಿಸಬೇಕೆಂದು ಹೇಳಲು ಇಚ್ಛಿಸುತ್ತೇನೆ.

              ----ಚಿನ್ಮಯಿ

Monday, November 9, 2020

ಸಮಯ

ಚಿತ್ರಕ್ಕೆ ಪದ್ಯ-೫೧


ಮುಂಜಾನೆ ಎದ್ದು ದಿನಚರಿ

ಶುರುಮಾಡುವುದರಲ್ಲಿದೆ ವಿನಯ,

ಏಳದಿದ್ದರೆ ಹಿಂಸಾತ್ಮಕವಾಗಿ

ಖಂಡಿತ ಎಬ್ಬಿಸುವುದು ಸಮಯ.


ಅಮ್ಮ, ಎದ್ದೇಳೋ ಎಂದೊಡನೆ

ಎದ್ದು ತಿಂಡಿಯ ತಿನ್ನಬೇಕು ಗೆಳೆಯ,

ಇಲ್ಲವಾದಲ್ಲಿ ಗ್ರಹಚಾರವು ಕೆಟ್ಟು

ಬೈದರೆ ಪೊಳ್ಳಾಗುವುದು ಸಮಯ.


ಅಸಡ್ಡೆಯಿಂದ ವರ್ತಿಸದೆ ನೀ

ಕೇಳು ನಾ ಹೇಳುವ ಒಂದು ವಿಷಯ,

ಸಮಯದ ಮಹತ್ವ ಇನ್ನಾದರೂ

ಗ್ರಹಿಸು ಮೀರುವ ಮುಂಚೆ ಸಮಯ.

             ----ಚಿನ್ಮಯಿ

Wednesday, November 4, 2020

ಕಡಲ ತೀರದಿ ಮುಸ್ಸಂಜೆ

ಚಿತ್ರಕ್ಕೆ ಪದ್ಯ-೫೦

ಕಡಲ ತೀರದಿ ನೇಸರನು

ಮಬ್ಬಾಗುವಂತಹ ಸಮಯ.

ಅವನ ನೋಡಲು ಕಾತರದಿ

ಒಳ ಸೂರ್ಯನು ಉದಯ.


ಕೆಂಗಣ್ಣ ಭಾಸ್ಕರನು ದಿಟ್ಟಿಸಿ

ನೋಡುತ್ತಿದ್ದಾಗ ನನ್ನನ್ನೇ.

ನಾನೊಮ್ಮೆ ಬಿಂಬಗ್ರಾಹಿಯಿಂದ

ಸೆರೆಹಿಡಿದೆ ಅವನನ್ನು ಮೆಲ್ಲನೆ.


ಸುತ್ತಲಿರುವ ಪರಿಸರದೊಡನೆ

ಪರಿಚಯಿಸಿದಾಗ ಎನ್ನನು ಕಡಲು.

ನಾ ಹಾಗೆ ನಿಂತುಬಿಟ್ಟೆ ವೀಕ್ಷಿಸುತ್ತ

ರವಿ ಸೇರುವ ಕಡೆಮುಗಿಲು.

               ----ಚಿನ್ಮಯಿ

Sunday, November 1, 2020

ಅಮ್ಮ ಹಚ್ಚಿದೊಂದ್ ಹಣತೆ

ಚಿತ್ರಕ್ಕೆ ಪದ್ಯ-೪೯

ಅಮ್ಮ ಹಚ್ಚಿದೊಂದ್ ಹಣತೆ

ಮನೆಯಂಗಳವನ್ನು ಬೆಳಗಿತು.

ಎಲ್ಲರೊಂದೆಂಬ ಸಮತೆ

ಎದೆಯಂಗಳದಿಂದ ಹರಿಸಿತು. 


ಕಗ್ಗತ್ತಲ ಸರಿಸಿ ಬೆಳಕಿನೆಡೆಗೆ

ಕರೆದೊಯ್ಯಿತೀಗ ಹಣತೆ.

ದಾರಿ ಕಾಣದ ಎನಗೆ ಹೆದ್ದಾರಿ

ತೋರಿ ಜ್ಞಾಪಿಸಿತು ಸರಳತೆ.

            ----ಚಿನ್ಮಯಿ