Saturday, April 30, 2022

ತ್ರಿಪದಿ- ೧

ಎತ್ತ ಸಾಗಲಿ— "ಮುಂದೆ ಸಾಗಲ? ಹಿಂದೆ ಸಾಗಲ ಚೆನ್ನಕೇಶವ!"

" 'ಎತ್ತ ಎತ್ತ' ಎಂಬ ಚಿಂತೆ ಬಿಡು ಸಮಚಿತ್ತ ಸಸಿಯ ನೆಡು

ದಿಟ್ಟ ಉತ್ತರ ಒಳಗಿಹುದೋ- ಚಿನ್ಮಯಿ"||


"ಭಾವಾರ್ಥ:"

ನಿನ್ನೆಯ ಬಗ್ಗೆ ಯೋಚಿಸಿ ಕೊರಗುತ ಬದುಕಲ? ಅಥವಾ ನಾಳೆಯ ಚಿಂತೆಯಂಬ ಚಿತೆಯಲ್ಲಿ ಸುಡುತ ಬದುಕಲ? ಏನು ಮಾಡಲೆಂದು, ಹೇಗೆ ಬದುಕಲೆಂದು ನಾನು ಶ್ರೀ ಕೃಷ್ಣನತ್ರ ಕೇಳುವಾಗ, ಹೀಗೆಂದು ನನ್ನೊಳಗೆ ನೆಲೆಸಿಹ ಶ್ರೀ ಕೃಷ್ಣನು ಉತ್ತರಿಸುತ್ತಾನೆ— ನಿನ್ನೆ-ನಾಳೆ, ಏನು-ಹೇಗೆ ಎಂಬ ಗಾಬರಿ-ಭಯಬೀರಿತ ಪ್ರಶ್ನೆಗಳ ಬಿಟ್ಟು, ಯೋಚನೆ-ಚಿಂತೆಗಳ ಅಂತೆ-ಕತೆಗಳ ಬಿಟ್ಟು ಮೊದಲು ನಿನ್ನ ಮನಸ್ಸಿನ ಹಿಡಿತ ಸಾಧಿಸುತ, ಪಂಚೇಂದ್ರಿಯಗಳ ಮೇಲಿಡಿತ ಸಾಧಿಸಿ ಈ ಕ್ಷಣದಲ್ಲಿ ಬದುಕಲಾರಂಭಿಸು ಆಗ ನಿನಗೆ ತಾನಾಗಿಯೇ ನಿನ್ನೊಳಗಿನಿಂದಲೇ ಉತ್ತರ ದೊರಕುವುದು, ಆ ಉತ್ತರವೇ ಬದುಕಲು ದಾರಿದೀಪವಾಗುವುದು, ಆ ಉತ್ತರದ ಸೂತ್ರಧಾರ ನಾನೇ ಆಗಿರುವೆನು...


                    ----ಚಿನ್ಮಯಿ

Saturday, April 2, 2022

ವರುಷದ ಕೊನೆಯ ಮಳೆ

ಮೋಡ ಬಿಕ್ಕಿಬಿಕ್ಕಿ ಅಳಲು-

ಜಗಕ್ಕೆ ಪರಿಚಯ ಹರುಷ.

ಪಂಚ ಭೂತಗಳ ಸಮ್ಮಿಲನ-

ಜನಿಸಿತು ಹೊಸ ವರುಷ.

ಬಂತೋ ವರುಷದ ಕೊನೆಯ ಮಳೆ..

ಬಾಳ ಸಾಗರವ ಸೇರಲಿ ಸಡಗರ ಹೊಳೆ.


ಹನಿಗಳ ತೋರಣ,

ಮಣ್ಣಿಗೆ ಹೂರಣ.

—ಇಬ್ಬರ ಸಂಗಮ,

ಯುಗದ ಉಗಮ.

ಬಂತೋ ವರುಷದ ಕೊನೆಯ ಮಳೆ..

ಮನವ ತೊಳೆದು ಅಳಿಸಲಿ ಕೊಳೆ.

         ----ಚಿನ್ಮಯಿ