ಧರೆಗೆ ಆದಿತ್ಯನ ಮುಂಜಾನೆ ನಮನ—
ಶಶಿಯ ಅತಿ ವಿನಯ ನಿರ್ಗಮನ.
ಆಗಸದಿ ಸಂಜೆಯ ಕೇಸರಿ ಚಿತ್ರಣ—
ಕಪ್ಪು ಚುಕ್ಕೆ ಶ್ವೇತವರ್ಣೀಯನ ಆಗಮನ.
ತ್ರಿನಂಟು ಎದೆಯಾಳದಷ್ಟಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
ಭೋರ್ಗರೆಯುವ ಅಲೆಗಳು ಶಾಂತ—
ಕಡಲೆದೆಯ-ತೀರದ ಗೆಳೆತನದಿಂದ.
ಮರಗಳು ಜೀವರಾಶಿಗಳು ಆನಂದ—
ಸಿಹಿನೀರು-ಉಪ್ಪುನೀರಿನ ಮಿಲನದಿಂದ.
ನೆಲದ ಖುಷಿ ಮುಗಿಲು ಮುಟ್ಟಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
ಮೇಘಗಳ ನಗೆ ತೋರಣ ಭುವಿಯೆಡೆ ಪಯಣ—
ಚಿಗುರೆಲೆಗಳೊಡನೆ ಹನಿಗಳ ಸ್ಪಂದನ.
ಗಿಡ-ಮರಗಳ ಸುಖಾಭಿಲಾಷೆ ನರ್ತನ—
ಗಾಳಿಯೊಡಗಿನ ಮಧುರ ಸಂಕಲನ.
ಪ್ರಕೃತಿಯ ಚಮತ್ಕಾರವಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
ಬೇರು ತಾ ನೀರ ಕುಡಿಯದೆ—
ತ್ಯಾಗದಿ ಉಣಿಸಲು ಚಿಗುರೆಲೆಗಳಿಗೆ.
ಹೂವು ತಾ ಜೇನ ಅನುಭವಿಸದೆ—
ವಾತ್ಸಲ್ಯದಿ ಎರೆಯಲು ದುಂಬಿಗೆ.
ಜಗದಿ ಪ್ರೇಮೋದಯವಾಗಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
----ಚಿನ್ಮಯಿ