Monday, June 30, 2025

ಹೇ ನಲ್ಲೆ, ಬದುಕಾಗು ಬದುಕಿಗೆ...!

ಹೇ ನಲ್ಲೆ, ಆಗೊಮ್ಮೆ ಕಂಡೆ ನೀ ನನಗೆ.

ಆಗಿಂದಲೂ ಏನೋ ಒಂಥರ ಒಳಗೆ—


ಗೆಜ್ಜೆನಾದದ ಹಂಬಲಿಕೆಯು ಹುಬ್ಬೆರಡಿಗೆ.

ಕುಣಿಸುತ ತಣಿಸುವ ಅಮಲು ಹಣೆಗೆ.

ನಿನ್ನೇ ನೋಡೋ ತವಕವು ಕಣ್ಣಿಗೆ.

ಸಿಹಿ ಸ್ಪರ್ಶಿಸೋ ಬಯಕೆಯು ತುಟಿಗೆ.

ಸಾಹಿತ್ಯ ಬರೆಯುವೆ ನಿನ್ನ ಮಧುರ ದನಿಗೆ.

ಸಂಗೀತದ ಜನನವು ನಿನ್ನೊಂದು ಕರೆಗೆ.

ಆ ಹಾಡ ಕೇಳುವ ಭಾಗ್ಯವೀ ಕಿವಿಗೆ.

ಕೆದರಿದ ಕೇಶ ತಾಕಿಸೊಮ್ಮೆ ಬೆರಳುಗಳಿಗೆ.

ಸುವಾಸನೆಯೇ ಅಮೃತವು ಮೂಗಿಗೆ.

ನೀ ಆಗಾಗ ಬರಬಾರದೇ ಬಳಿಗೆ...!?

ನಾ ಆಗಾಗ ಅನುಭವಿಸುವೇ ಈ ಘಳಿಗೆ.

ಬಲು ಮಜಮಯವೀ ಸಲುಗೆ.

ಇದುವೆ ಇರಬಹುದೇನೋ ಒಲವ ನಗೆ...!

ಜ್ವರವೀಗ ನೆಂದು ನೆಂದು ಭಾವ ಮಳೆಗೆ.

ಬಂದು ನೋಡೇನಾಗಿದೆ ನನ್ನೆದೆಗೆ.

ಪ್ರೇಮದಿಷಾರೆಯ ನೀಡಿ ಉಸಿರಾಗು ಉಸಿರಿಗೆ...

ಹೇ ನಲ್ಲೆ, ಬದುಕಾಗು ಬದುಕಿಗೆ...!


       ----ಚಿನ್ಮಯಿ

Saturday, June 28, 2025

ಅನಿರೀಕ್ಷಿತ ಬದುಕಿನಲ್ಲಿ...

ಅನಿರೀಕ್ಷಿತ ಬದುಕಿನಲ್ಲಿ, ಜವಾಬ್ದಾರಿಗಳ ಸ್ಪೋಟದಲ್ಲಿ—

ಹೆಗಲು ಭಾರ, ಮನಸ್ಸು ಭಾರ, ಹೃದಯವು ಭಾರ‌ ಕೊನೆಗೆ ಆತ್ಮವು ಭಾರ.


ಬಾಲ್ಯದ ಮುಗ್ಧತೆ ಕಣ್ಮರೆ.

ಹಮ್ಮು ಬಿಮ್ಮಿನ ಕೈಸೆರೆ.

ಸರಳ ಜೀವನದ ಕೊನೆಯಾತ್ರೆ.

ಹಗುರವಾಗಿಸುವುದು ಕಣ್ಣೀರೇ...

ಮನಸ್ಸು ನಾಳೆಗಳ್ಹಿಂದೆಯೇ ಓಡಿದೆ.

ಹೃದಯ ಒಳ-ಒಳಗೇ ಅತ್ತಿದೆ.

ಆತ್ಮವು 'ಈ ಕ್ಷಣದಲ್ಲಿ' ಸೋತಿದೆ.

ಸಮಾಜದ ಹೇರಿಕೆ ಏರಿದೆ.

ಜವಾಬ್ದಾರಿಗಳೇ ಗೆದ್ದಿದೆ...

ಜವಾಬ್ದಾರಿಗಳೇ ಗೆದ್ದಿದೆ...


ಇಂತಹ ಎಡೆಬಿಡದ 'ನಿನ್ನೆ-ನಾಳೆಗಳ' ಚಿಂತೆಯೆಂ ಭಾರಗಳ ನಡುವೆ;

'ಇಂದಿನ' ಆತ್ಮಘಾತ ಸರಿಯೇ...!?


             ----ಚಿನ್ಮಯಿ