Friday, November 7, 2025

ಅನುರಕ್ತಿ

ಎರಡೂ ಜಡೆಯನ್ನೂ ಎಳೆದೆನು ನಾನು,

ಸಿಹಿ ಕಿರುಚಾಟ ಕೇಳೋ ಚಟದಿಂದಲೇ..

ಇರುಸುಮುರುಸೆಲ್ಲಾ ಬದಿಗಿಡು ಇನ್ನೂ,

ಹಾಗೆ ಬಿಗಿದಪ್ಪಿಕೊಳ್ಳೋ ಹಠದಿಂದಲೇ..


ಎರಡೂ ಕಣ್ಣೊಡನೆ ಇನ್ನೆರಡೂ ಕಣ್ಣ,

ಸಹಿ ಸಂಭಾಷಣೆ ಬಲು ಹಿತವಲ್ಲವೇ...!

ಹೃದಯ ಹೃದಯಗಳ ಮಿಲನದ ಬಣ್ಣ,

ಸದಾ ಕಡುಗೆಂಪಿಗೆ ಸ್ವಂತವಲ್ಲವೇ...!


ಎರಡೂ ಕಿವಿಗಳ ಕಿವಿಯೋಲೆ ಒಂದೆ,

ಪ್ರೇಮ ಧ್ವನಿ ಭಾವ ಸಹ ಒಂದಲ್ಲವೇ...!

ಪಿಸುಗುಡುತಲೇ ಬಳಿಯಲಿ ನಿಂದೆ,

ಬಿಸಿಯುಸಿರಿನ ನಿರುತ್ತರ ನಿಂದಲ್ಲವೇ...!


ಎರಡೂ ಕೆನ್ನೆಗಳು ಗುಳಿಕೆನ್ನೆಗಳು,

ನಾಚಿ ನೀರಾಗೋ ಪ್ರೇಮ ಮದ್ದಿನಿಂದಲೇ..

ಎದೆಯಬಡಿತದಲಿ ಏರಿಳಿತಗಳು,

ಪ್ರೇಮ ದುಂದುಭಿಯ ಸದ್ದಿನಿಂದಲೇ..


     ----ಚಿನ್ಮಯಿ