ಹಾಡು: ಅವಳೇ ನನ್ನವಳು...
ಸಾಹಿತ್ಯ: ಚಿನ್ಮಯಿ
==============================
ನೀರಸ ಮೌನದೊಳು
ಸರಾಗ ಮಧುಸ್ವರ ಕೇಳಿತು.
ತಾಮಸ ಭಾವದೊಳು
ಬೆಳದಿಂಗಳು ಡೇರೆಯ ಹೂಡಿತು.
ಹತಾಶೆಯ ಜೀವನಕ್ಕೊಂದು
ಆಶಾಕಿರಣವಾದವಳೇ ನನ್ನವಳು...
ಜಿಜ್ಞಾಸೆಯ ಮಿಡಿತಕ್ಕೊಂದು
ಸಂಪೂರ್ಣತೆಯಾದವಳೇ ನನ್ನವಳು...
ನನ್ನ ಎದೆಯಾಳದ,
ಮನದಾಳದ ಪ್ರೇಮ ಸಂಜಾತದ
ಮೌನ ಕುರುಹು
ಅವಳೇ ನನ್ನವಳು... ||ಪ||
ಭೋರ್ಗರೆವ ಅಲೆಗಳು ಕಲ್ಲುಗಳ ತಾಗಿ ಶಾಂತವಾಗುವಂತೆ.
ಅವಳ ಬಾಹುಬಂಧನ ಸಾಂತ್ವನವೇ ನಿಶ್ಚಿಂತೆಯ ಸಂತೆ.
ಒಡನಾಡಿ ಜೀವನಾಡಿ ಸುಕೋಮಲೆ ಕೋಮಲೆ
ಕಣ್ಣಂಚಿನ ಬಿಂದುವನು ವಜ್ರವಾಗಿಸಿದವಳೇ ಅವಳೇ ನನ್ನವಳು... ||೧||
ನನ್ನ ಎದೆಯಾಳದ,
ಮನದಾಳದ ಪ್ರೇಮ ಸಂಜಾತದ
ಮೌನ ಕುರುಹು
ಅವಳೇ ನನ್ನವಳು... ||ಅನು ಪ||
ವರುಣನು ಪರ್ವತ ತುದಿಯಿಂದ ನದಿಯಾಗಿ ಭುವಿಯ ಸೇರುವಂತೆ.
ಅವಳ ನಯನ ಪ್ರೇಮ ಸಂಚಲನವೇ ಮಮತೆಯೊಳು ಮಿಂದಂತೆ.
ಸಹಭಾಗಿ ಅರ್ಧಾಂಗಿ ಸಹಚಾರಿಣಿ ತಾರಿಣಿ
ಎದೆಪೂರ ಆವರಿಸಿ ವಾಸವಾಗಿರುವವಳೇ ಅವಳೇ ನನ್ನವಳು... ||೨||
ನನ್ನ ಎದೆಯಾಳದ,
ಮನದಾಳದ ಪ್ರೇಮ ಸಂಜಾತದ
ಮೌನ ಕುರುಹು
ಅವಳೇ ನನ್ನವಳು... ||ಅನು ಪ||
ನೀರಸ ಮೌನದೊಳು
ಸರಾಗ ಮಧುಸ್ವರ ಕೇಳಿತು.
ತಾಮಸ ಭಾವದೊಳು
ಬೆಳದಿಂಗಳು ಡೇರೆಯ ಹೂಡಿತು.
ಹತಾಶೆಯ ಜೀವನಕ್ಕೊಂದು
ಆಶಾಕಿರಣವಾದವಳೇ ನನ್ನವಳು...
ಜಿಜ್ಞಾಸೆಯ ಮಿಡಿತಕ್ಕೊಂದು
ಸಂಪೂರ್ಣತೆಯಾದವಳೇ ನನ್ನವಳು...
ನನ್ನ ಎದೆಯಾಳದ,
ಮನದಾಳದ ಪ್ರೇಮ ಸಂಜಾತದ
ಮೌನ ಕುರುಹು
ಅವಳೇ ನನ್ನವಳು... ||ಪ||
----ಚಿನ್ಮಯಿ
No comments:
Post a Comment