Thursday, July 4, 2024

ಬೆಳಕು

ಚಿತ್ರಕ್ಕೆ ಪದ್ಯ- ೭೯


ಹಗಲಿಗೆ ಆದಿತ್ಯನೇ ಬೆಳಕು.

ಇರುಳಿಗೆ ಚಂದ್ರ-ತಾರೆಯರೇ ಬೆಳಕು.

ತಗಡುಗತ್ತಲೆಗೆ ಕಂದೀಲೇ ಬೆಳಕು.

ಕಂಗಾಲ ಜೀವಕ್ಕೆ ಭರವಸೆಯೇ ಬೆಳಕು.


ಬೀಸೋ ಗಾಳಿಗೆ ದಿಕ್ಕುಗಳೇ ಬೆಳಕು.

ಹರಿಯುವ ನೀರಿಗೆ ಹಾದಿಯೇ ಬೆಳಕು.

ಅಂಧಕಾರಕ್ಕೆ ಜ್ಞಾನವೇ ಬೆಳಕು.

ಸಂಪೂರ್ಣತೆಗೆ ವಿನಯವೇ ಬೆಳಕು.


ಹಾರೋ ಹಕ್ಕಿಗೆ ಆಕಾಶವೇ ಬೆಳಕು.

ಜಾರೋ ಜಲಪಾತಕ್ಕೆ ನೆಲವೇ ಬೆಳಕು.

ಸಂದಿಗ್ಧತೆಗೆ ಮೌನವೇ ಬೆಳಕು.

ಸಂಕೀರ್ಣತೆಗೆ ಧ್ಯಾನವೇ ಬೆಳಕು.


ಬಿಳಿ ಮೇಘಗಳಿಗೆ ಕರಿ ಮೇಘಗಳೇ ಬೆಳಕು.

ವಿಶಾಲ ಸಾಗರಕ್ಕೆ ನದಿಗಳೇ ಬೆಳಕು.

ಸುಂದರ ಸೃಷ್ಟಿಗೆ ಭೀಕರ ಅಂತ್ಯವೇ ಬೆಳಕು.

ಧರ್ಮಕ್ಕೆ ಅಧರ್ಮವೇ ಬೆಳಕು.


ಬೀಳೋ ವೃಕ್ಷಕ್ಕೆ ತನ್ನ ಬೀಜವೇ ಬೆಳಕು.

ಬಾಡೋ ಕುಸುಮಕ್ಕೆ ದುಂಬಿಯೇ ಬೆಳಕು.

ನಾಳೆಗಳಿಗೆ ಇಂದು-ನಿನ್ನೆಗಳೇ ಬೆಳಕು.

ಇಂದಿಗೆ ಈ ಕ್ಷಣವೇ ಬೆಳಕು.


ಬೆಳೆವ ಪೈರಿಗೆ ಮಣ್ಣು-ನೀರು-ಗಾಳಿಯೇ ಬೆಳಕು.

ಬೆಳೆದ ಭತ್ತಕ್ಕೆ ಕುಡುಗೋಲೇ ಬೆಳಕು.

ಬಾಲ್ಯಕ್ಕೆ ಆಟ-ಪಾಠ-ಮುಗ್ಧತೆಯೇ ಬೆಳಕು.

ಯೌವ್ವನಕ್ಕೆ ಬಾಲ್ಯದ ಕಲಿಕೆಯೇ ಬೆಳಕು.


ಕೆಟ್ಟದಕ್ಕೆ ಒಳ್ಳೆಯದೇ ಬೆಳಕು.

ಒಳ್ಳೆಯದಕ್ಕೆ ಕರ್ಮ ಸಿದ್ಧಾಂತವೇ ಬೆಳಕು.

ಮುಪ್ಪಿಗೆ ಬಾಲ್ಯ-ಯೌವ್ವನದ ಸಿಹಿ ನೆನಪುಗಳೇ ಬೆಳಕು.

ಮುಪ್ಪಿಗೆ ಜೀವನವಧಿಯ ಅನುಭವಗಳೇ ಬೆಳಕು.


ಸರಿಯುವ ಸಮಯಕ್ಕೆ ಋತುಗಳೇ ಬೆಳಕು.

ದಿಟ್ಟ ಜ್ಞಾನಾರ್ಜನೆಗೆ ಋಷಿಗಳೇ ಬೆಳಕು.

ಹಸಿವಿಗೆ ಅನ್ನಪೂರ್ಣೆಯೇ ಬೆಳಕು.

ಹಸಿದವನಿಗೆ ಅನ್ನದಾತನೇ ಬೆಳಕು.


ಜಗದ ಹಸಿವಿಗೆ ರೈತನೇ ಬೆಳಕು.

ದೇಶದ ಉಳಿವಿಗೆ ಯೋಧನೇ ಬೆಳಕು.

ಮಕ್ಕಳ ಬೆಳವಣಿಗೆಗೆ ತಂದೆ-ತಾಯಿಯರೇ ಬೆಳಕು.

ಅಡ್ಡ ದಾರಿಗೆ ಒಳ್ಳೆ ಸಂಗಡವೇ ಬೆಳಕು.


ಕಂಗಳಿಗೆ ತನ್ನ ರೆಪ್ಪೆಗಳೇ ಬೆಳಕು.

ಮಿಂಚುಹುಳುವಿಗೆ ತನ್ನ ಬೆನ್ನೇ ಬೆಳಕು.

ಧೈರ್ಯಕ್ಕೆ ಭಯವೇ ಬೆಳಕು.

ಸಂಶಯಕ್ಕೆ ಕಾಲವೇ ಬೆಳಕು.


ಹೆಮ್ಮರಕ್ಕೆ ಸಸಿಯೇ ಬೆಳಕು.

ಹಿರಿಯರಿಗೆ ಹಸುಳೆಯೇ ಬೆಳಕು.

ಹಿರಿತನಕ್ಕೆ ಕಿರಿತನವೇ ಬೆಳಕು.

ಸಿರಿತನಕ್ಕೆ ಬಡತನವೇ ಬೆಳಕು.


ಭೋರ್ಗರೆಯುವ ಅಲೆಗಳಿಗೆ ತೀರವೇ ಬೆಳಕು.

ಅಹಂಕಾರದ ನಿಯಂತ್ರಣಕ್ಕೆ ಸಂಸ್ಕಾರವೇ ಬೆಳಕು.

ಉರಿಯುವ ಜ್ವಾಲಾಮುಖಿಗೆ ಪಾತಾಳವೇ ಬೆಳಕು.

ಎದೆಯ ಜ್ವಾಲೆಗೆ ಮನಃ ಶಾಂತಿಯೇ ಬೆಳಕು.


ಸಾವಿಗೆ ಹುಟ್ಟೇ ಬೆಳಕು.

ಮರು ಹುಟ್ಟಿಗೆ ಸಾವೇ ಬೆಳಕು.

ಸೋಲಿಗೆ ಗೆಲುವೇ ಬೆಳಕು.

ಮರು ಗೆಲುವಿಗೆ ಸೋಲೇ ಬೆಳಕು.


ಹೆದ್ದಾರಿಗೆ ಬೀದಿ ದೀಪಗಳೇ ಬೆಳಕು.

ಕಾಲ್ದಾರಿಗೆ ರೂಢಿಯೇ ಬೆಳಕು.

ಹಣತೆಗೆ ಎಣ್ಣೆಯೇ ಬೆಳಕು.

ಸಮತೆಗೆ ಮನೋಭಾವವೇ ಬೆಳಕು.


ಪ್ರೇಮಕ್ಕೆ ಆತ್ಮ ಸಮ್ಮಿಲನವೇ ಬೆಳಕು.

ಸಂಸಾರಕ್ಕೆ ನಂಬಿಕೆ-ಗೌರವಗಳೇ ಬೆಳಕು.

ಬಾಳ್ವೆಗೆ ನಗು ಮೊಗವೇ ಬೆಳಕು.

ಬಾಳಿಗೆ ಸಂತೃಪ್ತ ನಗುವೇ ಬೆಳಕು.


ಸ್ನೇಹಕ್ಕೆ ಅಜ್ಞಾತತೆಯೇ ಬೆಳಕು.

ಆತ್ಮೀಯತೆಗೆ ಪರಿಚಯವೇ ಬೆಳಕು.

ದ್ವೇಷಕ್ಕೇ ಸಂಯಮವೇ ಬೆಳಕು.

ಸಂಬಂಧಕ್ಕೆ ಕ್ಷಮೆಯೇ ಬೆಳಕು.


ಸೌಂದರ್ಯಕ್ಕೆ ಕುರೂಪವೇ ಬೆಳಕು.

ಜರಿಯುವಿಕೆಗೆ ಸರಳತೆಯೇ ಬೆಳಕು.

ಮೂಢತೆಗೆ ವಿಜ್ಞಾನವೇ ಬೆಳಕು.

ಬದುಕಿಗೆ ಸುಜ್ಞಾನವೇ ಬೆಳಕು.


ಕಲ್ಲು ಬಂಡೆಗೆ ಉಳಿ ಪೆಟ್ಟೇ ಬೆಳಕು.

ವಿಗ್ರಹಕ್ಕೆ ಅಭಿಷೇಕವೇ ಬೆಳಕು‌.

ಸಾಧಕನಿಗೆ ಗುರಿಯೇ ಬೆಳಕು.

ಸಾಧನೆಗೆ ಕ್ಷಮತೆಯೇ ಬೆಳಕು.


ಉತ್ತರಕ್ಕೆ ದಕ್ಷಿಣವೇ ಬೆಳಕು.

ಪೂರ್ವಕ್ಕೆ ಪಶ್ಚಿಮವೇ ಬೆಳಕು.

ಸರಿ ಉತ್ತರಕ್ಕೆ ಹಲವು ಪ್ರಶ್ನೆಗಳೇ ಬೆಳಕು.

ಮರುಪ್ರಶ್ನೆಗೆ ತಪುತ್ತರವೇ ಬೆಳಕು.


ಇತಿಹಾಸಕ್ಕೆ ಪುರಾಣಗಳೇ ಬೆಳಕು.

ಸತ್ಯಾನ್ವೇಷಣೆಗೆ ಪುರಾವೆಗಳೇ ಬೆಳಕು.

ಜಗದ ಸುಂದರತೆಗೆ ಅಂತರಂಗ ಶುದ್ಧಿಯೇ ಬೆಳಕು.

ಪರಿಪೂರ್ಣ ಬಾಳಿಗೆ ಬದುಕಿದ ರೀತಿಯೇ ಬೆಳಕು.


ಉತ್ತಮ ಸಮಾಜಕ್ಕೆ ವೇದ-ಉಪನಿಷತ್ಗಳೇ ಬೆಳಕು.

ಒಳ ಅರಿವಿಗೆ ಭಗವದ್ಗೀತೆಯೇ ಬೆಳಕು.

ದೇಹದ ಕಾಂತಿಗೆ ಆತ್ಮವೇ ಬೆಳಕು.

ಅಂತಃಕರಣಕ್ಕೆ ಪರಮಾತ್ಮನೇ ಬೆಳಕು.


                    ----ಚಿನ್ಮಯಿ

No comments:

Post a Comment