Thursday, April 30, 2020

ಒಲವಿನ ಸಂಹಿತೆ

ನನ್ನ ಒಳಗಿನ ಭಾವಕ್ಕೆ ನೀನೇ ಆಗಿರಲು ಸ್ನೇಹಿತೆ,
ಈ ಭಾವದ ಕೋರಿಕೆ ಒಂದೇ ಆಗು ಒಲವಿನ ಸಂಹಿತೆ.
              ----ಚಿನ್ಮಯಿ

ಜ್ಞಾನದ ಜ್ಯೋತಿ

ಅಂಧಕಾರದಲ್ಲಿ ಮುಳುಗಿರಲು ಹೇಗೆ ಕಾಣುವುದು ಅಂತಃಕರಣ ಜ್ಯೋತಿ!
ಜ್ಞಾನ ಜ್ಯೋತಿಯಿಂದಲೇ ಅಂಧಕಾರವು ಅಳಿದು ಅಂತಃಕರಣವು ಕಾಂತಿ.
              ----ಚಿನ್ಮಯಿ

ಅಂತರಂಗ ಶುದ್ಧತೆ

ಓಂ ನಮಃ ಶಿವಾಯ ಎಂದ ಮಾತ್ರ ದೇವನೊಲಿವನೇ,
ಅಂತರಂಗ ಶುದ್ಧಿಯಿಲ್ಲದೆ ಅವನೊಲಿಯುವದು ನಾ ಕಾಣೆ.

ಹರಿ ನಾಮ ಸ್ಮರಣೆ, ಹರ ನಾಮ ಸ್ಮರಣೆ.
ಹರಿ ನಾಮ ಸ್ಮರಣೆ, ಹರ ನಾಮ ಸ್ಮರಣೆ.
ಎಷ್ಟು ಮಾಡಿದರು ತ್ಯಾಜ್ಯ ಮನಃ ಶುದ್ಧಿಯಿಲ್ಲದೆ,
ಏನು ಮಾಡದಿರುವುದೇ ಲೇಸು ಮನಃ ಶುದ್ಧಿಯಿಲ್ಲದೆ.

ಇತ್ತ ದೇವರಿಗೆಲ್ಲಾ, ಅತ್ತ ಬಡವನಿಗೇನಿಲ್ಲ.
ಇತ್ತ ದೇವರಿಗೆಲ್ಲಾ, ಅತ್ತ ಬಡವನಿಗೇನಿಲ್ಲ.
ಕೊಡುಗೈ ದಾನಿಯ ದಾನದ ಅಂತರಂಗ ಶುದ್ಧತೆ.
ಕೊಡದಿದ್ದರು ಲೇಸು ದಾನಿಗಿಲ್ಲದಿದ್ದರೆ ಅಂತರಂಗ ಶುದ್ಧತೆ.
              ----ಚಿನ್ಮಯಿ

ಜೀವನವೊಂದು ನಾಟಕ

ಮೇಲೊಬ್ಬ ಕುಂತಿರುವನು ನಿರ್ದೇಶಕ,
ನಾವು ನೀವು ಇಲ್ಲಿ ಪಾತ್ರದಾರಿಗಳಷ್ಟೆ.
ಅವನೊಬ್ಬನೇ ಜಗದ ಪಾಲಕ,
ನಾವು ನೀವು ಕೊಟ್ಟ ಪಾತ್ರ ಮಾಡಬೇಕಷ್ಟೆ.

ನಮಗೆಲ್ಲಾ ಅವನೇ ಮಾಲಿಕ,
ಅವನು ಹೇಳಿದಂತೆ ಇಲ್ಲಿ ನಡೆಯಬೇಕಷ್ಟೆ.
ಈ ಜೀವನವೊಂದು ನಾಟಕ,
ನಮ್ಮ ಪಾತ್ರ ಮುಗಿದ ಮೇಲೆ ಹೋಗಬೇಕಷ್ಟೆ.
                ----ಚಿನ್ಮಯಿ

Wednesday, April 29, 2020

ಕೋಪಮ್ ಸರ್ವನಾಶ ಪ್ರೇರಿತಮ್


ಚಿತ್ರಕ್ಕೆ ಪದ್ಯ-೫

ಮೊದಲನೆ ನಡುಗನ್ನಡ ಪದ್ಯ-

ನಿನ್ನ ಮನಸೋಳ್ ಕೋಪದಿಂ ತುಂಬಿರಲ್ ಸಂತಸ ನಿಜದಿಂ ನುಡಿಯಲುಂ ಆಪುದೆ!
ಕೋಪಮ್ ಸರ್ವನಾಶ ಪ್ರೇರಿತಮ್ ಎಂಬುದಂ ನೀ ಅರಿಯದಿರಲ್ ನರಃ ಆಗಿರಲ್ ಆಪುದೆ!
              ----ಚಿನ್ಮಯಿ

ಬೇಸಿಗೆಯಲ್ಲಿ ಮಳೆಗಾಲ


ಚಿತ್ರಕ್ಕೆ ಪದ್ಯ-೪

ಮುಗಿಯಿತು ಚಳಿಯಲ್ಲಿ ತತ್ತರಿಸೋ ನಡುಕ,
ಶುರುವು ಬೇಸಿಗೆಯಲ್ಲಿ ಶೆಕೆಯ ಜಳಕ.
ಚಳಿಗಾಲವನ್ನು ಹೇಗಾದರೂ ತಡೆಯಬಹುದು ಸ್ವಾಮೀ,
ಈ ಬೇಸಿಗೆಯ ಧಗೆ ತಡೆಯಲು ಸಾಧ್ಯವಿಲ್ಲ ಸ್ವಾಮೀ!

ಇವೆರಡರ ನಡುವೆ ಮಳೆಗಾಲ ಉಂಟಲ್ಲವೇ,
ಮಳೆಗಾಲವು ಎರಡರ ಮಿಶ್ರಣದ ನಂಟಲ್ಲವೇ.
ಚಳಿಗಾಲದಲ್ಲಿ ಮಳೆಗಾಲ ಮಾಮೂಲಿಯಂತೆ,
ಬೇಸಿಗೆಯಲ್ಲಿ ಮಳೆಗಾಲ ಏನೋ ಮಜ ಕೊಡುವಂತೆ.
               ----ಚಿನ್ಮಯಿ

Sunday, April 26, 2020

ಮಳೆಯ ಜೊತೆ ಕಾಫಿಯ ಕತೆ


ಚಿತ್ರಕ್ಕೆ ಪದ್ಯ-೩

ಈಗ ತಾನೆ ತುಂತುರು ಹನಿಗಳು ಮೋಡಗಳಿಂದ ಹೊರಬರಲು,
ಝಲ್ಲಂತ ಸದ್ದು ಕರಣಗಳಿಗೆ ಇಂಪು.
ಹನಿಗಳ ತೋರಣ ನಯನಗಳಿಗೆ ತಂಪು.

ಮೋಡ ಕವಿದ ವಾತಾವರಣ ಮೂಡಿ ಮಳೆ ಜಿನುಗುತ್ತಿರಲು,
ಮೂಗಿಗೆ ತಾಕಿತು ಸುವಾಸನೆಭರಿತ ಮಣ್ಣಿನ ಕಂಪು.
ಎಂಥ ಮಜ ಸ್ವಾಮಿ ಈಗ ಸಿಕ್ಕರೆ ಕಾಫಿಯ ಒಂದು ಸಿಪ್ಪು.
                   ----ಚಿನ್ಮಯಿ

Saturday, April 25, 2020

ಅಮ್ಮನೇ ದೈವ

ಸಂದರ್ಭಕ್ಕೆ ಪದ್ಯ-೧
ಸಂದರ್ಭ:
||೧||- ಒಬ್ಬ ಹುಡುಗ, ಅವನಿಗೆ ಅಪ್ಪ ಇಲ್ಲ ಅಮ್ಮನೇ ಎಲ್ಲಾ ಆಗಿರುವುದು.
||೨||- ಅಮ್ಮ ಅವನನ್ನು ಕಷ್ಟಪಟ್ಟು ಸಾಕಿ ಬೆಳೆಸೋದು.
||೩||- ಅವನು ಪೇಟೆಗೆ ಹೋಗಿ ಹಾಳಾಗೋದು.
||೪||- ಮಾಡಿದ ತಪ್ಪರಿದು ಅವನು ಮರಳಿ ಅಮ್ಮನ ಬಳಿ ಬರುವುದು.

ನಗುವ ವಯಸ್ಸಿನಲ್ಲೇ ಅಳುವಂಥಾಯಿತು ನಾನು ಅಪ್ಪನ ನೆನೆದು,
ಅಳಬೇಡ ಕಂದ ನಾನಿರುವೆ ಎಂದು ಕಣ್ಣೀರ ಒರೆಸಿದಳು ಹೆತ್ತ ಕರುಳು.
ಅಪ್ಪ ಅಮ್ಮ ಎಲ್ಲವೂ ಅಮ್ಮನೇ ಆಗಿರಲು ನಗುವೆನು ಅಮ್ಮನ ನೆನೆದು,
ಆಡುತ, ನಲಿಯುತ ತಿಳಿದೆನು ನನಗಾಶ್ರಯವೇ ಅಮ್ಮನ ನೆರಳು. ||೧||

ನಾನು ಓದಿ ಬೆಳೆದು ದೊಡ್ಡವನಾಗಿ ಒಳ್ಳೆಯ ಮನುಷ್ಯ ಆಗಬೇಕೆಂಬುದು ನಮ್ಮಮ್ಮನ ಆಶಯ,
ಅದರಂತೆ ಅವಳಿಗೆ ಕಷ್ಟವಾದರು ನನಗೆ ಇಷ್ಟವಾಗುವಂತೆ ಮುದ್ದಾಡಿ ಬೆಳೆಸಿದಳು.
ಎಷ್ಟೋ ಸಲ ಅವಳಿಗೆ ಹಸಿವಿದ್ದರು ಲೆಕ್ಕಿಸದೆ ನನ್ನ ಹಸಿವು ನೀಗಿಸಿದ ತಾಯಿಯೇ ಕರುಣಾಮಯ,
ನನ್ನ ಇಷ್ಟ ಕಷ್ಟ ಎಲ್ಲವನ್ನು ತಿಳಿದು ಸಾಕಿ ಸಲಹಿ ನಡೆಸಿದಳು ಹಿಡಿದು ಬೆರಳು. ||೨||

ಕೆಲವು ಕಾಲ ಊರಲ್ಲೇ ಓದಿ ಮುಂದಕ್ಕೆ ಓದಲು ಪೇಟೆಗೆ ಹೋಗಬೇಕಾಯಿತು,
ಅಮ್ಮನ ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರು ಹೋಗುವುದೇ ಅನಿವಾರ್ಯ.
ಪೇಟೆಯಲ್ಲಿ ಪ್ರೇಮದ ಚಕ್ರವ್ಯೂಹಕ್ಕೆ ಸಿಲುಕಿ ಕೊನೆಗೆ ಮೋಸ ಹೋಗುವಂತಾಯಿತು,
ಅಲ್ಲದೆ ದುಶ್ಚಟಗಳ ಸಹವಾಸದಿಂದ ಓದಲು ಆಗದೇ ಬದುಕಲು ಆಗದೇ ಮರೆತ್ತಿದೆ ಧ್ಯೇಯ. ||೩||

ಬದುಕಲ್ಲಿ ಇನ್ನೇನೂ ಉಳಿದಿಲ್ಲವೆಂದು ಆತ್ಮಹತ್ಯೆಯೇ ದಾರಿ ಎಂದನಿಸಿತು,
ಆದರೆ ಆಗ ನಯನಗಳು ಜ್ಞಾಪಿಸಿಕೊಂಡವು ಹಡೆದ ತಾಯಿಯ ರೂಪ.
ಮಂಕು ಕವಿದಿದ್ದ ಬುದ್ದಿಯನ್ನು ಜ್ಞಾನ ಜೋತಿಯೊಂದು ಬಡಿದೆಬ್ಬಿಸಿತು,
ಮರಳಿ ಊರಿಗೆ ಓಡಿದೆನು ಅರಿತು ತಾಯಿಯಿಲ್ಲದೇ ಏನಿಲ್ಲ ತಾಯಿಯೇ ದೇವರ ಪ್ರತಿರೂಪ. ||೪||
                    ----ಚಿನ್ಮಯಿ

Friday, April 24, 2020

ಕವಿಗಳೇ ಬದುಕಲು ಸ್ಪೂರ್ತಿ

ಕವಿಗಳ ಭಾವನೆಯೇ ಬದುಕಿಗೆ ನಾಂದಿ,
ಪದಗಳ ಜೋಡಣೆಯೇ ಬದುಕಿಗೆ ಹಾದಿ.
             ----ಚಿನ್ಮಯಿ

ಪ್ರಕೃತಿ-ಪುರುಷ


ಚಿತ್ರಕ್ಕೆ ಪದ್ಯ-೨

ಪುರುಷನೊಳಗೆ ಸ್ತ್ರೀ ಇರುವಳು.
ಸ್ತ್ರೀ ಒಳಗೆ ಪುರುಷನಿರುವನು.
ಒಬ್ಬರೊಳಗೊಬ್ಬರು ನೆಲಸಿಹರೋ,
ಸಮತೋಲನ ಕಾಪಾಡಿಹರೋ.

ಪುರುಷನ ಯೋಚನೆಗಳು ಹಕ್ಕಿಗಳಂತೆ,
ಚಿಲಿಪಿಲಿ ಸದ್ದು ಮಾಡುವುದು.
ಸ್ತ್ರೀ ಯ ಯೋಚನೆಗಳು ಸೂರ್ಯನಂತೆ,
ತನ್ನ ಕಿರಣಗಳ ಕಾಂತಿ ಬೀರುವುದು.

ಪುರುಷನ ಪ್ರೀತಿ ಸೂರ್ಯನಂತೆ,
ಮುಳುಗಿದ ಮೇಲೂ ಉದಯಸಿದ ಹಾಗೆ.
ಸ್ತ್ರೀ ಯ ಪ್ರೀತಿ ಹಕ್ಕಿಗಳಂತೆ,
ಸದಾ ಗುಂಪಾಗಿ ಜೊತೆಯಲ್ಲೇ ಇರುವ ಹಾಗೆ.

ಪುರುಷನ ಕೊರಳಿನಿಂದ ಮೂಡಲು ಪ್ರೀತಿಯ ಜೋಕಾಲಿ,
ಸ್ತ್ರೀ ಬೀಳದಂತೆ ಕಾಪಾಡುವನು ಉಸಿರನ್ನು ಬಿಗಿದಿಡಿದು.
ಎರಡು ಮರಗಳಂತೆ ಎರಡು ಕೈಗಳು ಜೊತೆಯಾಗಲಿ,
ಪುರುಷ-ಸ್ತ್ರೀ ಜೊತೆ ಇಲ್ಲದಿದ್ದರೆ ಬ್ರಹ್ಮಾಂಡವೇ ಮುಂದೆ ಸಾಗದು.
                    ----ಚಿನ್ಮಯಿ

Thursday, April 23, 2020

ಸನಿಹ

ನೈಸರ್ಗಿಕ ಪ್ರೇಮಿ ನಾನು,
ಮನಸೋತೆನು ನಿನಗೆ ಇನ್ನು.
ಸನಿಹವೇ ಇರಲು ನೀನು,
ನನಗೆ ದುಃಖವು ಎಲ್ಲಿ ಇನ್ನು!
                     ----ಚಿನ್ಮಯಿ

ನಾನು ಕ್ಷೇಮ

ನಿರ್ಸಗದ ಮಡಿಲಲ್ಲಿ ನಿರ್ಸಗದಾಮ,
ಕಾವೇರಿಯ ಮಡಿಲಲ್ಲಿ ನಾನು ಕ್ಷೇಮ.
           ----ಚಿನ್ಮಯಿ

ಸಲಿಗೆ

ಸಲಿಗೆ ಮೂಡೋ ಸಮಯ ನೀನು ಬಂದೆ ಗೆಳೆಯ.
ಸಲಿಗೆ ಮೂಡೋ ಸಮಯ ನೀನು ಬಂದೆ ಗೆಳೆಯ.
ನಿನ್ನ ಹಾಗೆ ಯಾರು ಇಲ್ಲ ಓ ಇನಿಯ.
ನಿನ್ನ ಹಾಗೆ ಯಾರು ಇಲ್ಲ ಓ ಇನಿಯ.

ಸಲಿಗೆ ಮೂಡೋ ಸರದಿ ಈಗ ಶುರುವು ಗೆಳತಿ.
ಸಲಿಗೆ ಮೂಡೋ ಸರದಿ ಈಗ ಶುರುವು ಗೆಳತಿ.
ನೀನೇ ನನ್ನ ಭಾವ ಕೇಳೆ ಓ ಜೀವ.
ನೀನೇ ನನ್ನ ಭಾವ ಕೇಳೆ ಓ ಜೀವ.
               ----ಚಿನ್ಮಯಿ

ನನ್ನ ಉಸಿರೇ...!

ಕಣ್ಣ ರೆಪ್ಪೆಯಲ್ಲಿ ಅಡಗಿದೆ ನಿನ್ನ ಬಿಂಬ.
ಕಣ್ಣ ಹನಿಯೊಂದಿಗೆ ಜಾರಿತು ನಿನ್ನ ಪ್ರತಿಬಿಂಬ.
ಕಾಣದೆ ಎಲ್ಲಿಗೆ ಹೋದೆ ನನ್ನ ಜೀವವೇ?
ನೆನಪಾಗಿ ಉಳಿದೆ ಏಕೆ ನನ್ನ ಉಸಿರೇ...?
                  ----ಚಿನ್ಮಯಿ

ಬಿಗಿದಪ್ಪು

ಕ್ಷಮಿಸಿಬಿಡು ನೀನೇ ಸೋತು ಒಮ್ಮೆ ನನ್ನನ್ನು ಬಿಗಿದಪ್ಪಿ,
ಆಲಂಗಿಸುವೆ ನಾನೇ ಕೂತು ಕಾಪಾಡುತ್ತ ನಿನ್ನ ಬಿಗಿದಪ್ಪಿ.
                   ----ಚಿನ್ಮಯಿ

ಸಮ್ಮಿಲನ

ಕಣ್ಣಂಚಿನ ಭಾವವ ಹೇಳುವೆ ನಾನು,
ತುಟಿಯಂಚಲಿ ಕಿರು ನಗೆಯ ಬೀರು ನೀನು.
ಒಳ-ಒಳಗೆ ಮೂಡಲು ಹಿತಮಯ ಕಾತುರ,
ನಾ ಇರಲು ನಿನ್ನ ಜೊತೆ ಇನ್ನೇತಕೆ ಬೇಸರ!

ಎದೆಯಾಸೆಯು ಒಂದೆ, ನೀನಿರಲು ಸದಾ ಕಣ್ಣ ಮುಂದೆ.
ಸಲಿಗೆಯ ಸುಲಿಗೆ ಮಾಡುತ ಸೇರುವ ಬಾ ಇನ್ನು ಮುಂದೆ.
ಮೈಮರೆಯುವೆ ನಾ, ನೀನು ಒಮ್ಮೆ ನಗೆ ಬೀರಿದರೆ,
ಮನಸೋಲುವೆ ನಾ, ಹಾಗೆ ನೀನು ಬಿಗಿದಪ್ಪಿದರೆ.

ಉಸಿರಲಿ ಬೆರೆತೆ ನೀನು ನನ್ನೊಳಗೆ ಸೆರೆಯಾಗಿ.
ಚಡಪಡಿಕೆ ಬಿಡು ನೀನು ನಾ ಇರುವೆ ನಿನ್ನವನಾಗಿ.
ಪರಪಂಚ ನೀನೇ, ಆಗು ಬಾ ನನ್ನ ಬಾಳಿನ ಹೊಂಗಿರಣ.
ಸದಾ ಖುಷಿಯಿಂದ ಇರುವೆವು, ಆದರೆ ನಮ್ಮಿಬ್ಬರ ಸಮ್ಮಿಲನ.
                      ----ಚಿನ್ಮಯಿ

ಸೈನಿಕ

ಓ ಸೈನಿಕ, ಪ್ರಾಣ ರಕ್ಷಕ.
ದೇಶ ರಕ್ಷಕ, ಶತ್ರು ಭಕ್ಷಕ,
ನೀನೇ ಸೈನಿಕ ನೀನೇ ಸೈನಿಕ.

ಭಯೋತ್ಪಾದಕರ ದಾಳಿಗೆ ಅಗಲಿದ ವೀರ ಸೈನಿಕರಿಗೆ ನಮ್ಮೆಲ್ಲರ ನಮನ,
ಮೋದಿ ಅವರು ಸೈನಿಕರಿಗೆ ಸ್ವತಂತ್ರ ನೀಡಿ ಸೆಳೆದರು ನಮ್ಮೆಲ್ಲರ ಗಮನ.

ರಕ್ತದ ಕಣ ಕಣದಲ್ಲೂ ದೇಶದ ಅಭಿಮಾನ,
ಶತ್ರುವಿನ ಎದೆ ಬಗೆಯಲು ಏತಕೆ ಬಿಗುಮಾನ?

ಏಳು ಬೇಟೆಯಾಡು, ನಡೆಸಿಬಿಡು ಅಂತಕರ ಮಾರಣಹೋಮ,
ಪ್ರತೀಕಾರದ ಕಿಚ್ಚಿಗೆ ಯುದ್ದ ಸಾರಿ ಮಾಡಿಬಿಡು ಶತ್ರುವಿನ ನಿರ್ಣಾಮ.

ಭಯೋತ್ಪಾದಕರ ಹುಟ್ಟಡಗಿಸಿ ಸತ್ತ ಯೋಧರ ಆತ್ಮಕ್ಕೆ ಶಾಂತಿ ಕೊಡಿಸಿ,
ಭಾರತೀಯರೆಲ್ಲರೂ ನಿಮ್ಮೊಂದಿಗೆ ಇದ್ದೀವಿ ರಣ ಕಹಳೆ ಬಾರಿಸಿ.
                    ----ಚಿನ್ಮಯಿ

ತಂಗಾಳಿಯ ಸ್ಪರ್ಶ

ತಂಗಾಳಿಯ ಸ್ಪರ್ಶವು ಸೋಕುತಿವುದು ಮೈಯಿಗೆ,
ಎನ್ನ ಮನವು ಸ್ವೀಕರಿಸುತಿವುದು ನರ-ನಾಡಿಗೆ.
                ----ಚಿನ್ಮಯಿ

ತಲಕಾವೇರಿ

ತಲಕಾವೇರಿ ನೀ ನೆಲೆಸಿರುವೆ ಘಟ್ಟದ ಮೇಲೆ,
ಮಂಜಿನ ಸ್ಪರ್ಶದಿಂದ ಕೆಳಗಿಳಿಯುವೆ ನೀನು,
ನಿನ್ನನ್ನು ನೋಡಲೆಂದು ಬಂದೆನು ನಾ ಮೇಲೆ,
ಬರುವಷ್ಟರಲ್ಲಿ ಕೆಳಗಿಳಿದು ಹೋದೆಯಾ ನೀನು!
              ----ಚಿನ್ಮಯಿ

ಗೆಳೆಯ ಗೆಳೆಯ

ಮನಸಿದ್ದರೆ ಮಾರ್ಗವು ಉಂಟು ಗೆಳೆಯ ಗೆಳೆಯ,
ಛಲವಿದ್ದರೆ ಜಯವು ಉಂಟು ಗೆಳೆಯ ಗೆಳೆಯ.

ಅನಿಸಿದ್ದನ್ನು ಒಮ್ಮೆ ಅಂಜದೆ ಮಾಡು,
ಜಗತ್ತನ್ನು ಒಮ್ಮೆ ಎದುರಿಸಿ ನೋಡು,
ಜಯಭೇರಿಯು ನಿನ್ನ ಪಾಲಿಗೆ ಖಚಿತ,
ಕಿರುನಗೆಯು ನಿನ್ನ ಮೊಗಕೆ ಉಚಿತ.

ಸರಿಯಾದ ಹಾದಿಯಲ್ಲಿ ನಿನ್ನ  ಹೆಜ್ಜೆ ಗುರುತು,
ಅದರಲ್ಲೇ ಅಡಗಿದೆ ನಿನ್ನಯ ಸ್ವತ್ತು.
ಬಾಳಿಗೆ ಬೆಳಕು ನಿನ್ನ ಪ್ರತಿಬಿಂಬವು,
ನಾಳಿನ ಚಿಂತೆಯು  ಈಗಲೇ ಕೊನೆಯು.
                     ----ಚಿನ್ಮಯಿ

ಸಖ-ಸಖಿ

ಸುಖಿ ಸುಖಿ ನಾನು ಸುಖಿ ಸುಖಿ,
ನಿನ್ನಿಂದಲೇ ನಾನು ಸುಖಿ ಸಖಿ.

ಸುಖ ಸುಖ ಈಗ ಸುಖ ಸುಖ,
ನಿನ್ನಿಂದಲೇ ಬಂತು ಸುಖ ಸಖ.
                     ----ಚಿನ್ಮಯಿ

ಭರವಸೆಯ ನಡಿಗೆ

ಅಪ್ಪನ ಅಡಗಿದ ಪ್ರೀತಿಯೇ ಹೃದಯದ ಶೀರ್ಷಿಕೆ,
ಅದರ ಜೊತೆಗೆ ಸಾಗಿದೆ ಭರವಸೆಯ ನಡಿಗೆ.
ಕೋಪದ ನಿನ್ನೀ ಗುಣವೇ ಪ್ರೀತಿಗೆ ಬುನಾದಿ,
ಎನ್ನ ಬಾಳಿಗೆ ನೀನೇ ಕನ್ನಡಿ,
ಅದುವೇ ಭರವಸೆಯ ನಡಿಗೆ.
ಅದುವೇ ಭರವಸೆಯ ನಡಿಗೆ.

ಅಮ್ಮನ ಹಾರೈಕೆಗೆ ಇಲ್ಲ ಹೋಲಿಕೆ,
ಪ್ರೀತಿಯ ಹೊಸ್ತಿಲಲಿ ಭರವಸೆಯ ನಡಿಗೆ.
ಬೈಗುಳದ ಜೇಂಕಾರ ಸವಿದ ಕ್ಷಣವೇ,
ಭಾವುಕತೆಗೆ ಇಲ್ಲ ಕೊರತೆ ಓ ಮನವೇ,
ಅದುವೇ ಭರವಸೆಯ ನಡಿಗೆ.
ಅದುವೇ ಭರವಸೆಯ ನಡಿಗೆ.
                 ----ಚಿನ್ಮಯಿ

ಹಣತೆ

ಎನ್ನ ಬಾಳಿನ ಬೆಳಕು ಅಮ್ಮನೆಂಬ ಹಣತೆ,
ಅವಳ ದಾಟಿಯಲ್ಲೆ ಪರಿಪೂರ್ಣ ಮಮತೆ.
ಎನ್ನ ಬಾಳಿನ ಗುರುವು ಅಪ್ಪನೆಂಬ ಹಣತೆ,
ಅವನ ಉದ್ದೇಶವು ಉದ್ದಾರದ ಮಾತುಕತೆ.
ಎನ್ನ ಬಾಳಿನ ಸ್ಪೂರ್ತಿ ಅಣ್ಣನೆಂಬ ಹಣತೆ,
ಅವನ ಹಾದಿಯಲ್ಲಿ ಅಡಗಿದೆ ಸರಳತೆ.
ಎನ್ನ ಬಾಳಿನ ನಗುವು ಅತ್ತಿಗೆಯೆಂಬ ಹಣತೆ,
ಅವಳ ಅಡುಗೆಯೇ ಜೇನಿನಂತೆ.
             ----ಚಿನ್ಮಯಿ

ಹೆಜ್ಜೆಯ ಗುರುತು

ಸಮುದ್ರ ದಡದ ಹೆಜ್ಜೆಯ ಗುರುತನ್ನು ಅಲೆಗಳು ಅಳಿಸಿವೆ,
ಎದೆಯ ಮೇಲಿನ ಹೆಜ್ಜೆಯ ಗುರುತನ್ನು ಕಣ್ಣೀರು ಅಳಿಸಿವೆ.
                     ----ಚಿನ್ಮಯಿ

ಹೇಮ

ಸಿಹಿಯಾದ ಅಪ್ಪುಗೆ ನನಗೆ ಕೊಡಲು ನೀನು, ಶುರುವಾಯಿತು ಒಡಲಲ್ಲಿ ಪ್ರೇಮ.
ಶಾಯಿಯಿಂದಲೇ ಮನದ ಭಾವನೆಯ ಹೇಳುವೆ ಕೇಳು, ನೀನೇ ನನ್ನ ಹೇಮ.
              ----ಚಿನ್ಮಯಿ

ಪ್ರಕೃತಿಯ ಗುಟ್ಟು

ಎಲ್ಲೋ ಹುಟ್ಟುವ ನದಿಯು ಮತ್ತೆಲ್ಲೋ ಸೇರುವುದು ಕಡಲನು.
ಎಲ್ಲೋ ಚಿಗುರಿದ ಹೂವು ಮತ್ತೆಲ್ಲೋ ಗುಡಿಯಲ್ಲಿ ದೇವರಿಗೆ ಮುಡಿಪು.
ಯಾರೋ ಬೆಳೆದ ಅನ್ನವು ಮತ್ತ್ಯಾರಿಗೋ ಉಣಲು ಸಿಗುವುದು.
ಯಾರೋ ನೆಟ್ಟ ಸಸಿಯು ಮತ್ತ್ಯಾರಿಗೋ ನೆರಳು ನೀಡುವುದು.
                ----ಚಿನ್ಮಯಿ

ಭಾರತ 🇮🇳

ಇತಿಹಾಸ ತಿಳಿಸುತ್ತದೆ, ಭರತ ಭೂಮಿಗೆ ಸರಿಸಾಟಿಯಾಗಿ ಯಾರಿಲ್ಲವೆಂದು.
ಎಷ್ಟೋ ಮೊದಲುಗಳು ಇಲ್ಲಿಂದಲೇ ಶುರುವು ಎಂದು ನಮ್ಮ ಹಿರಿಯರು ತೋರಿಸಿದರಲ್ಲ ಅಂದು.

ಪುಣ್ಯಾತ್ಮರು ಹೋರಾಡಿ ಶ್ರಮಿಸಿ,
ನೆತ್ತರು ಹರಿಸಿ, ಪ್ರಾಣತ್ಯಾಗ ಮಾಡಿದ ಪುಣ್ಯ ಭೂಮಿ ನಮ್ಮದು.
ಪ್ರತೀ ದಿನ ಸೈನಿಕರು ದೇಶಕ್ಕಾಗಿ, ನಮಗಾಗಿ, ಹೋರಾಡಲು ನಮಗಿಲ್ಲಿ ಶಾಂತಿಯುತ ಬಾಳು.

ವ್ಯವಸಾಯವೇ ನಮ್ಮ ದೇಶದ ಬೆನ್ನೆಲುಬು.
ರೈತನಿಲ್ಲದ ಜೀವನ ಊಹಿಸಲು ಅಸಾಧ್ಯವು.

ದೇಶದೆಲ್ಲರೂ ಒಂದೇ ಎಂದು ಕೂಗಿ ಹೇಳುವೆ,
ಸಮೃದ್ಧ, ಭವ್ಯ ದೇಶವು ನಮ್ಮಯ ಭಾರತ.

ಜೈ ಹಿಂದ್
                       ----ಚಿನ್ಮಯಿ

ಶಿವ ಮೆಚ್ಚುವ ಕಾರ್ಯ

ಉಪವಾಸ ವ್ರತದಿಂದ ಶಿವ ಮೆಚ್ಚುವನೇನೋ ನಾ ಕಾಣೆ...! ಆದರೆ ಹಸಿದವನಿಗೆ ಅನ್ನ ಉಣಿಸಿದರೆ ಶಿವ ಮೆಚ್ಚುವನಯ್ಯಾ🙏🏼
                      ----ಚಿನ್ಮಯಿ

ಎಜುಕೇಶನ್ ಸಿಸ್ಟಮ್

ಎಲ್ಲಾ ತಿಳಿದವರು ತೆಪ್ಪಗಿದ್ದಾರೆ ಏತಕೋ ತಿಳಿದಿಲ್ಲಯ್ಯಾ!
ಏನಾಗಿದೆ ಎಜುಕೇಶನ್ ಸಿಸ್ಟಮ್ಗೆ ನಾ ಕಾಣೆನಯ್ಯಾ!?
                ----ಚಿನ್ಮಯಿ

ಮೋಕ್ಷದ ದಾರಿ


ಚಿತ್ರಕ್ಕೆ ಪದ್ಯ-೧

ಜೀವನ ಅರಿತು ಸಾಗಲು ಮೋಕ್ಷದೆಡೆಗೆ,
ಹೆದ್ದಾರಿ ತನಗೆ ತಾನೇ ಸಿಗುವುದು ನಮಗೆ.
              ----ಚಿನ್ಮಯಿ

ಕಾವೇರಿ

ಕಾವೇರಿ ಮಾತೆಯು ಪ್ರಕೃತಿ ಸ್ವರೂಪಿ,
ಹರಿಯುತ್ತ ಸೇರುವಳು ಎಲ್ಲರಿಗೂ ಸಮನಾಗಿ.

ಕನಸಿನ ಆಶಯ ನಾವು ಕಾಣುತ,
ಮನಸಿನ ಆಸೆಯ ಕಳೆದುಕೊಳ್ಳುತ.
ಎದ್ದು ಬಂದೆವು. ಓ ಎದ್ದು ಬಂದೆವು,
ನ್ಯಾಯಕ್ಕೆ ನಾವು ಎಂದೂ ಸಿದ್ದವು.

ರಾಜಕೀಯ ದ್ರೋಹ ಎಂದೂ ಮರೆವೆವು,
ನ್ಯಾಯದ ಸುತ್ತ ಸದಾ ಇರುವೆವು.
ಎರಡೂ ರಾಜ್ಯಗಳ ಮುಖಂಡರಿಗೆ ಮಖಕ್ಕೆ ಉಗಿವೆವು,
ಸೋಲನ್ನು ನಾವು ಎಂದೂ ಒಪ್ಪೆವು.

ಕರುನಾಡು ಇದು ಚಿನ್ನದ ನಾಡು,
ಮಾನವೀಯತೆ ಮೆರೆವ ಶಾಂತಿಯ ಬೀಡು.
ತೊಂದರೆ ಕೊಟ್ಟರೆ ನಾವು ಉಗ್ರ ಪ್ರತಾಪಿ,
ಸಹನೆ ಕಾಪಾಡಿದರೆ ಹಂಚುತ್ತೇವೆ ಪ್ರೀತಿ.

ಕನಸಿನ ಆಶಯ ನಾವು ಕಾಣುತ್ತ,
ಮನಸಿನ ಆಸೆಯ ಕಳೆದುಕೊಳ್ಳುತ್ತ.
ನಮಗೆ ನಮ್ಮವರೆ ಮೋಸ ಮಾಡುತ್ತ,
ಕೊನೆಗೆ ನಮಗೆ ನ್ಯಾಯ ಸಿಗತ್ತ...?

ನಾ ಅರಿಯನು...!
                        ----ಚಿನ್ಮಯಿ

ನೆಮ್ಮದಿ

ಚಿಂತಿಸಿ ಪ್ರಯೋಜನವೇನು ಇಲ್ಲ,
ನೆಮ್ಮದಿಗಿಂತ ದೊಡ್ಡದು ಏನು ಇಲ್ಲ.
           ----ಚಿನ್ಮಯಿ

ಸಣ್ಣ ಆಶಯ, ದೊಡ್ಡ ವಿಷಯ

ನಾನು ನವೆಂಬರ್ ಕನ್ನಡಿಗನಲ್ಲ- ಇದು ನಮ್ಮೆಲ್ಲರ ಹಣೆಪಟ್ಟಿ ಆಗಲೆಂದು ಆಶಿಸುತ್ತೇನೆ🙏🏼 ‌                                                                                              ----ಚಿನ್ಮಯಿ

ಮನುಷ್ಯತ್ವದ ಜ್ಞಾನ

ಮನುಜ ಮೊದಲು ಮಾನವನಾಗು,                 
ನಂತರ ಸಂಶೋಧನೆಯ ಕುರಿತು ಮಾತಾಡು.
ಮನುಜ ಮೊದಲು ಮಾನವನಾಗು,
ನಂತರ ಸಾಧನೆಯ ಮೌಲ್ಯದ ರುಚಿ ನೋಡು.
ಮನುಜ ಮೊದಲು ಮಾನವನಾಗು,
ನಂತರ ಓದಿರುವುದನ್ನು ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಅಳವಡಿಸು.                                             
                     ----ಚಿನ್ಮಯಿ

ಬದುಕಿಗೆ ಸರ್ ಐಸಾಕ್ ನ್ಯೂಟನ್ ರವರ ಕಾನೂನು

Newton's third law is applicable for Life also. How? Check out.
ಬದುಕನ್ನ ನಾವು ಪ್ರೀತಿಸಿದರೆ, ಬದುಕು ನಮ್ಮನ್ನ ಪ್ರೀತಿಸುತ್ತದೆ. ಬದುಕನ್ನ ನಾವು ದ್ವೇಷಿಸಿದರೆ, ಬದುಕು ನಮ್ಮನ್ನ ದ್ವೇಷಿಸುತ್ತದೆ.
This is what the law says, "For every action there is an equal and opposite reaction."
                    ----ಚಿನ್ಮಯಿ

ಅಲೆಮಾರಿ

ಜೀವನ ಅರಿತವನು ಸಾಗುವನು ಮೋಡಗಳ ತುದಿಗೆ,
ಒಂಟಿಯಾಗಿರುವನು ಮನಃಶಾಂತಿಗಾಗಿ ಜನರ ಸಂಪರ್ಕವಿಲ್ಲದೆ,
ಅಲೆಮಾರಿಯಾಗಿ ಅಲೆಯುವನು ಪ್ರಕೃತಿಯ ಕಡೆಗೆ.
              ----ಚಿನ್ಮಯಿ

ಶಾಯಿಯ ನರ್ತನ

ನನಗೆ ತಿಳಿದಿರುವುದೊಂದೆ, ನಾಚುತಾ ಶಾಯಿಯಿಂದ ನಿನ್ನ ವರ್ಣಿಸೋದು.
ಆದರೆ,
ಕೆಲವೊಮ್ಮೆ ಶಾಯಿಯೇ ಕಿರುನಗೆಯಿಂದ ನಾಚುತಾ ನಿನ್ನ ವರ್ಣನೆ ಮಾಡುವುದು.
          ----ಚಿನ್ಮಯಿ

ನಮ್ಮ ಕನ್ನಡಿಗರ ಗಮನಕ್ಕೆ!

ನಮ್ಮ ಕನ್ನಡಿಗರ ಗಮನಕ್ಕೆ ಒಂದು ಮಾತು,
ಕೇಳಿದರೆ ಅದುವೇ ಕನ್ನಡ ಭಾಷೆಗೆ ಒಳಿತು,
ಇಲ್ಲವೇ ಕಾದಿದೆ ಸ್ವತಂತ್ರೀಯ ಭಾಷೆಗೆ ಆಪತ್ತು...!

ಕನ್ನಡ ಭಾಷೆಯು ಅಮೃತಾ ಎಂಬುದು ನೀನು ಅರಿತುಕೋ,
ಗಾಂಚಲಿ ಬಿಟ್ಟು ಕನ್ನಡ ಮಾತಾಡೋದು ಮೊದಲು ಕಲಿತುಕೋ.

ಚಿನ್ನದ ಗಣಿಯ ನಾಡು ಇದು ಎಂಬುದು ನಿನಗೆ ಮತ್ತೊಮ್ಮೆ ತಿಳಿಯಲಿ,
ಯಾಕೋ ಪಾಪ ಮರೆತು ಮೆರೆಯುತ್ತಿರುವೆ! ನಿನ್ನೀ ಸೊಕ್ಕು ನಾಶವಾಗಲಿ.

ಪರಭಾಷೆಗೆ ಗೌರವ ನೀಡು ಆದರೆ, ನಮ್ಮ ಕರ್ನಾಟಕವೇ ನಮಗೆ ನಾಡು-ಬೀಡು.
ಸುಮ್ಮನೆ ಅಸಡ್ಡೆ ತೋರದಿರು ನನ್ನ-ನಿನ್ನ ಕನ್ನಡಕ್ಕೇ ಗೆಳೆಯ,
ಮೆಲ್ಲನೆ ಅಳಿವುದು ಕನ್ನಡ, ಅದಕ್ಕೇ ಇರಲಿ ಕನ್ನಡವೇ ನಿನ್ನ ಸನಿಹ.

ಜೀವನದಿ ಕಾವೇರಿ, ಪ್ರೀತಿಯಿಂದ ಸವಿಯಿರಿ-ಕುಡಿಯಿರಿ,
ಜೀವನಾಡಿ ಕನ್ನಡ, ಖುಷಿಯಿಂದ ನಡೆಯಿರಿ-ನುಡಿಯಿರಿ.

ಕನ್ನಡ ಜೇನಿನಂತೆ, ಕಲಿಯೋದು ಹಾಗು ಬರೆಯೋದು ಬಹಳ ಸಲೀಸು,
ನಾವೆಲ್ಲರೂ, ತಾಯಿ ಕಾವೇರಿ ಹಾಗು ಭುವನೇಶ್ವರಿಯ ಮುದ್ದಿನ ಕೂಸು(ಗಳು).

 ಮಲೆನಾಡಿನ ಮಲೆಯಲ್ಲಿ, ಮಲೆಯ ಮೂಲೆಯಲ್ಲೂ ಸ್ವರ್ಗದ ಸಮ್ಮಿಳನ,
ಮಳೆನಾಡಿನ ಉಸಿರಲ್ಲಿ, ಮಳೆಯ ಸುಗಂಧದಲ್ಲೂ ಕನ್ನಡಿಗರ ತನು-ಮನ.

೮ ಜ್ಞಾನಪೀಠ ಪ್ರಶಸ್ತಿಗಳ ಸುರಿಮಳೆ,
ಶಿಖರದ ಮೇಲೆಯು ಕಾಫಿಯ ಬೆಳೆ.

ಹೀಗೇ ಮುಂದುವರಿದರೆ,
ಮುಂದಿನ ದಿನಗಳಲ್ಲಿ ಕನ್ನಡ ತಿಳಿ-ಕಲಿ-ನುಡಿ-ನಡೆ ಮಾತುಗಳು ಮಾಯವಾಗಿ,
ಕನ್ನಡ ಎಕ್ಕಡಾ? ಎನ್ನಡಾ ಕನ್ನಡ? ಪರಿಸ್ಥಿತಿ ಬರುವುದಂತೂ ಖಚಿತವಾದ ಕಹಿ.

ಅದಕ್ಕೇ,

ನಮ್ಮ ಕನ್ನಡಿಗರ ಗಮನಕ್ಕೆ ಒಂದು ಮಾತು,
ಕೇಳಿದರೆ ಅದುವೇ ಕನ್ನಡ ಭಾಷೆಗೆ ಒಳಿತು,
ಇಲ್ಲವೇ ಕಾದಿದೆ ಸ್ವತಂತ್ರೀಯ ಭಾಷೆಗೆ ಆಪತ್ತು...!

ಕನ್ನಡ ಭಾಷೆ  ಅಮೃತಾ ಎಂಬುದು ನೀನು ಅರಿತುಕೋ,
ಗಾಂಚಲಿ ಬಿಟ್ಟು ಕನ್ನಡ ಮಾತಾಡೋದು ಮೊದಲು ಕಲಿತುಕೋ.
               ----ಚಿನ್ಮಯಿ

ಯಾರಿದ್ದಾರೇ ಮನವೇ...!?

ಯಾರಿದ್ದಾರೇ ಮನವೇ ನಿನ್ನೊಟ್ಟಿಗೆ ಹೇಳುವೆಯಾ ನನಗೊಮ್ಮೆ!?
ನೋವುಂಡ ಮನವು ನೀನು ಯಾರಿಲ್ಲ ನಿನ್ನೊಡನೆ ಅರಿತುಕೋ ಈಗಲೇ,
ಕಣ್ಣೀರ ಹನಿಯು ಕೂಡ ನಿನ್ನೊಟ್ಟಿಗಿರಲ್ಲ ಕೊನೆಗೆ ಜಾರಿ ಹೋಗುತ್ತೆ ಕೆಳಗೆ,
ಯಾರಿದ್ದಾರೇ ಮನವೇ ನಿನ್ನೊಟ್ಟಿಗೆ ಹೇಳುವೆಯಾ ನನಗೊಮ್ಮೆ!?
             ----ಚಿನ್ಮಯಿ

ಜೀವನ ಅರಿತವನ ಮಾತುಗಳು

ಮಸಣದ ಹೂವನ್ನು ತಲೆಗೆ ಮುಡಲು ಆದೀತೇ!
ಮಸಣದ ಹೆಣವನ್ನು ಮರಳಿ ತರಲು ಆದೀತೇ!
ಏನು ಮಾಡಲು ಸಾಧ್ಯವೋ ಅದುವೇ ಮಾಡಬೇಕು,
ಇರುವುದನ್ನ ನೆನೆದು ಸಂತೃಪ್ತಿಯಿಂದ ಬಾಳಬೇಕು,
ಎಲ್ಲರೂ ಒಂದೇ ಇಲ್ಲಿ ಭೇದ-ಭಾವ ಯಾಕಣ್ಣ?
ಇರುವುದೊಂದು ಜೀವನ ಸಂತೋಷದಿಂದಿರೋಣ.
               ----ಚಿನ್ಮಯಿ

ಕರುನಾಡು

ಸಹ್ಯಾದ್ರಿಯ ಮಲೆ
ಸಮೃದ್ಧಿಯ ನೆಲೆ.
ಜೇನಿನಂತೆಯೇ ಸಿಹಿ
ಬಾನೆತ್ತರದ ನುಡಿ.
ಸ್ವರ್ಗದ ಮೆಟ್ಟಿಲು
ಕರುನಾಡಿನ ಪಾಲು.
ಶ್ರೀಗಂಧದ ಸುವಾಸನೆ
ಸಂಜೀವಿನಿ ಸ್ವರೂಪಿನೇ.
ಕನ್ನಡಿಗರ ಜೀವ ನಾಡಿ
ಕಾವೇರಿ
ಅಮೃತ ಸ್ವರೂಪಿಯೇ ಈ ವೈಯಾರಿ.
ತನು-ಮನ-ಧನವೂ ಕನ್ನಡ.
ನುಡಿಯಿರಿ ಸಮೃದ್ಧ ಕನ್ನಡ.
             ----ಚಿನ್ಮಯಿ

ನಂಬಿಕೆಯೇ ಅಥವಾ ಮೂಢನಂಬಿಕೆಯೇ...!?

ದೈವವ ಒಲಿಸಲು ಪರದಾಡುತಿರುವರು ಸುಮ್ಮನೆ ಜನರು,
ತಮ್ಮೊಳಗೆ ದೈವವು ನೆಲಸಿಹನು ಎನ್ನುವುದು ಅರಿಯದ ಮೂಡರು ಇವರು.

ದೇವರ ಹುಡುಕಾಟದಲ್ಲಿ ಒಳ್ಳೆಯದನ್ನೇ ಮರೆತಿರುವರು ನಮ್ಮವರು,
ಪಕ್ಕದಲ್ಲಿರೋ ಹಸಿದವನ ಹೊಟ್ಟೆಯಲ್ಲೇ ದೇವರಿದ್ದಾನೇ ತಿಳಿಯಿರಿ ಇಂದಾದರು.

ಕಾಣದ ದೇವರಿಗಾಗಿ ಹಾತೊರೆಯುತಿರುವರು ಜೊತೆಗಾರರು,
ಕಣ್ಣ ಮುಂದೆಯೇ ಭಗವಂತನಿದ್ದಾನೇ ಗಮನಿಸಿ ಈಗಲಾದರು.

ಭಯ-ಭಕ್ತಿ ಸಹಜ ದೇವರಿಗಾಗಿ,
ನಿನ್ನ ಇಷ್ಟ, ನಿನ್ನ ಖುಷಿ ದಾನ ಮಾಡು ದೇವರಿಗೆ.
ಸ್ಪಂದಿಸು ಹಸಿದವನ ಕೂಗಿಗಾಗಿ,
ಸ್ವಲ್ಪವಾದರೂ ದಾನ ನೀಡು ಅಗತ್ಯವಿದ್ದವರಿಗೆ.

ಸ್ನೇಹಿತರೆಲ್ಲರು ಕೇಳಿರಿ ದೇವರಲ್ಲಿ ಇರಲಿ ನಂಬಿಕೆ,
ಇಲ್ಲದ ಅತೀಯಾದ ನಂಬಿಕೆ ಒಳ್ಳೆಯದಲ್ಲ ಜೋಕೆ.

ನಿನಗೆಷ್ಟು ಸರಿಯಾದದ್ದು ಇದೆಲ್ಲಾ ನೀನೇ ಯೋಚಿಸು ಒಮ್ಮೆ ಮನುಜನೇ,
ಯಾವುದು ಬೇಕು ನಿನಗೆ ಆರಿಸು- ನಂಬಿಕೆಯೇ ಅಥವಾ ಮೂಢನಂಬಿಕೆಯೇ...!?
          ----ಚಿನ್ಮಯಿ

Collab challenge from YourQuote- "Rain in 15 words"

ಮಳೆ ಎಂಬುದು-
"ಮೋಡಗಳ ಸಮ್ಮಿಲನ,
ಹನಿಗಳ ತೋರಣ."
     ----ಚಿನ್ಮಯಿ

ಜೀವನ

ಸುಂದರ ಯುವತಿಯ ಸೊಬಗನ್ನು ವರ್ಣಿಸಲು ಪದಗಳೇ ಸಾಲದು,
ಅವಳ ಕನಸುಗಳ ರಮ್ಯತೆ ಆಕಾಶದಷ್ಟೇ ವಿಶಾಲವಾದದ್ದು.

ಮೃದುವಾದ ಹೃದಯದಿ ಅವಳು ಸದಾ ನಗುತ ಬಾಳುತ್ತಿದ್ದಳು,
ಹುಣ್ಣಿಮೆ ಚಂದಿರನಂತೆ ಸದಾ ಕಾಲ ಪ್ರಕಾಶಿಸುತ್ತಿದ್ದಳು.

ಒಮ್ಮೆಲೆ ಖುಷಿಯಾದ ಬಾಳಿಗೆ ಬಿರುಗಾಳಿಯೊಂದು ಅಪ್ಪಳಿಸಿತು,
ಕಣ್ಣೀರ ಹನಿಯ ಧಾರಾಕಾರವು ಹಿಂದೆಂದು ಬರದಂತೆ ಹೊಮ್ಮಿತು.

ಆದರು ದೃಢಗೆಡದೆ ಎದುರಿಸಿ ನಿಂತಳು ಯುವತಿ ನೀಡದೆ ಕಾರಣ,
ಕಷ್ಟದ ಕಾರಣ ನೀಡದೆ ಎದುರಿಸಬೇಕು ಎಂಬುದೇ ಜೀವನ.
                ----ಚಿನ್ಮಯಿ

ಕಿರುನಗೆ ಹಾಗು ಪ್ರೀತಿ ನಡುವಿನ ಕದನ

ಆಕಾಶದಲ್ಲಿ ಮೋಡಗಳು ಚಲಿಸುವ ವಿನಿಮಯ ದೃಶ್ಯವನ್ನು ನೋಡುತಲೇ,
ಮನಮೋಹಕ ಸಂದೇಶ ಅಲ್ಲಿಂದಲೇ ಬರುವುದೆಂದು ಕಾಯುತ ನಿಂತಿರುವಾಗಲೇ,
ಕಿರುನಗೆ ಮೊಗದಲಿ ಮೂಡಿತು. ಪ್ರೀತಿಯು ಎದೆಯಲಿ ಅರಳಿತು...!
                       ----ಚಿನ್ಮಯಿ

ಊಹೆಗೂ ಮೀರಿದ್ದು

ಯಾವತ್ತು ಕೂಡ ಒಬ್ಬ ಮನುಷ್ಯನ ಭಾವನೆಗಳ ಜೊತೆಗೆ ಮತ್ತು ಮುಗ್ಧತೆಯ ಜೊತೆಗೆ ಆಟವಾಡಬಾರದು. ಅದರಿಂದ, ಅವರಿಗೆ ಎಷ್ಟು ನೋವುಂಟಾಗುತ್ತದೆ ಎಂದು ಊಹಿಸಲು ಅಸಾಧ್ಯವು.
             ----ಚಿನ್ಮಯಿ

ದೃಷ್ಟಿಕೋನ

ನಾವು ಪ್ರಪಂಚವನ್ನು ಹಾಗು ಬದುಕನ್ನು ನೋಡುವ ದೃಷ್ಟಿಕೋನ ಸರಿಯಾಗಿದ್ದರೆ, ಎಲ್ಲವೂ ಸರಿಯಾಗಿರುತ್ತದೆ.
                 ----ಚಿನ್ಮಯಿ

ಬದುಕು

ಬದುಕಿರುವುದು ಜೀವನ ಸಾರ್ಥಕ ಪಡಿಸಿ ಸಾಯುವುದಕ್ಕೆ.
ಸತ್ತ ಮೇಲೆ ಮತ್ತೆ ಬದುಕುವುದು ಬದುಕನ್ನು ಮತ್ತೊಮ್ಮೆ ಜೀವಿಸುವುದಕ್ಕೆ.
ಇದೊಂದು ಮುಗಿಯದ ಅಧ್ಯಾಯ!
ದೇವರ ಆಟ ಬಲ್ಲವರು ಯಾರಯ್ಯಾ!?
                ----ಚಿನ್ಮಯಿ

ಹೆಣ್ಣು

ಅಮ್ಮನಿಂದಿಡಿದು ಮಗಳ ತನಕ ನಮ್ಮ ಜೊತೆಯಲ್ಲಿ ಸದಾ ಸಾಗುವಳು ಹೆಣ್ಣು.
ಕನ್ನಡಿಯಂತೆ ಅವಳ ಮನಸ್ಸು, ಒಡೆದೋಗದಂತೆ ಕಾಪಾಡಬೇಕಾದದ್ದು ಗಂಡು.

ಗಂಡಿಗೆ ದೊರೆತಂತಹ ಪ್ರೇಮದ ಕಾಣಿಕೆಯೇ ಹೆಣ್ಣು.
ಹೆಣ್ತನಕ್ಕೆ ಗೌರವ ಸದಾ ಸಲ್ಲಿಸಬೇಕು ನಮ್ಮಯ ಈ ಕಣ್ಣು.

ಹೆಣ್ಣಿಗೆ ಸರಿಸಾಟಿ ಯಾರಿಲ್ಲವೆಂಬುದೇ ಸತ್ಯ.
ದೇವತೆಯು ಇವಳೆ, ಕಾಪಾಡುವಳು ನಮ್ಮನ್ನು ದಿನನಿತ್ಯ.

ಅಜ್ಜಿ, ಅಮ್ಮ, ಅಕ್ಕ, ತಂಗಿ, ಹೆಂಡತಿ, ಅತ್ತಿಗೆ, ಸ್ನೇಹಿತೆ, ಮಗಳು ಹೀಗೇ ಹೆಣ್ಣಿಗೆ ಹಲವಾರು ರೂಪ.
ಗಂಡಿನ ಸಂತೋಷವನ್ನ ಸದಾ ಬಯಸುವ ಈ ತ್ಯಾಗಮಯಿ ನಮಗೆ ಪ್ರಕೃತಿಯ ಸ್ವರೂಪ.

ನಾರಿಯೇ ನೀ ಮಾತೆಯು,
ನಿನಗೆ ಶತಕೋಟಿ ನಮನಗಳು.
       ----ಚಿನ್ಮಯಿ

ಕೊರೊನಾ ಸೋಂಕು

ಏನು ಮಾಡೋದು ಸ್ವಾಮಿ, ನಾವೆಲ್ಲಾ ಪ್ರಕೃತಿ ಮಾತೆಗೆ ಮಾಡಿರೋ ಅನ್ಯಾಯ ನಮಗೆ ಮುಳುವಾಗಿದೆ ಇಂದು.
ಏನು ಮಾಡೋದು ಸ್ವಾಮಿ, ನಾವೆಲ್ಲಾ ಭೂತಾಯಿಗೆ ಮಾಡಿರೋ ದ್ರೋಹವು ನಮ್ಮನ್ನೇ ಹೀನಾಯವಾಗಿ ಕೊಲ್ಲುತ್ತಿದೆ ಇಂದು.

ಇದು ಕಲಿಯುಗ ಸ್ವಾಮಿ, ವಿಪರೀತ ಬುದ್ದಿ ವಿನಾಶಕ್ಕೆ ಕಾರಣವು ಎಂಬುದು ಕಟುಸತ್ಯ.
ಪ್ರಪಂಚ ಮುಳುಗುವ ಸುಳಿವು ನೀಡಿಹನು ದೇವರು, ಜನರ ಮೋಸಕ್ಕೆ ಖಚಿತವು ಅಂತ್ಯ.

ಮನುಷ್ಯನಿಗೆ ಮನುಷ್ಯನೇ ಮುಳುವು ಎಂಬುದು ತಿಳಿದಾಯಿತು ಎಲ್ಲರಿಗೂ ಇಂದು.
      ----ಚಿನ್ಮಯಿ

ಈಶ್ವರ, ಸರ್ವೇಶ್ವರ

ಓಂ ಅದ್ವೈತ ಭಾಸ್ಕರಂ, ಶಿವ ಶಿವ ಶಂಕರಂ, ನಮೋ ಶಿವಂ.
ಓಂ ಅರ್ಧನಾರೀಶ್ವರಂ, ಶಿವ ಶಿವ ಸುರೇಶಂ, ನಮೋ ಶಿವಂ.

ಸೃಷ್ಟಿಲಯಕರ್ತೃ ನೀನೇ ಮಹಾದೇವ.
ಸಕಲಜೀವರಾಶಿ ನಿನ್ನಲ್ಲೇ ಮಹಾದೇವ.

ಓಂ ಈಶಂ-ಗೌರೀಶಂ, ಶಿವ ಶಿವ ನಟೇಶಂ. ನಮೋ ನೀಲಕಂಠಂ.
ಓಂ ಹರಂ-ವಿಶ್ವನಾಥಂ, ಶಿವ ಶಿವ ಸರ್ವೇಶಂ. ನಮೋ ನೀಲಕಂಠಂ.

ಆದಿ-ಅಂತ್ಯ ನಿನ್ನಿಂದಲೇ ಪರಮಾತ್ಮ.
ಆತ್ಮ-ಜೀವ ಎಲ್ಲಾ ನೀನೇ ಪರಮಾತ್ಮ.

ಓಂ ರುದ್ರಂ-ವೀರಭದ್ರಂ, ಶಿವ ಶಿವ ಮಂಜುನಾಥಂ. ನಮೋ ನಟರಾಜಂ.
ಓಂ ಮಸಣವಾಸಿಂ, ಶಿವ ಶಿವ ಕೈಲಾಸನಾಥಂ. ನಮೋ ನಟರಾಜಂ.

ಋಗ್ವೇದ-ಯಜುರ್ವೇದ-ಸಾಮವೇದ-ಅಥರ್ವವೇದ ಪ್ರವೀಣಂ.
ಸಂಗೀತ-ಸಾಹಿತ್ಯ-ನಾಟ್ಯ-ಯೋಗ ಶುಭಂಕರಂ.
                 
ಹರ ಹರ ಮಹಾದೇವ.
                ----ಚಿನ್ಮಯಿ

ಶ್ರೀ ರಾಮನ ಸ್ತುತಿ

ರಾಮ ರಾಮ ರಘುಪತಿ ಶ್ರೀ ರಾಮ,
ಹನುಮನ ಗುರುವು ರಾಜಾರಮ.
ರಾಮ ರಾಮ ಸೀತಾಪತಿ ಶ್ರೀ ರಾಮ,
ದಶರಥನ ಮಗುವು ರಾಜಾರಾಮ.

ಲಕ್ಷ್ಮಣ ಸಹೋದರ,
ರಘುಕುಲ ಶುಭಂಕರ,
ಶ್ರೀ ರಾಮ.
ಭರತ ಮೆಚ್ಚಿದ ಅರಸ,
ಹನುಮ ಪೂಜಿಸೋ ಅಧ್ಯಕ್ಷ,
ಶ್ರೀ ರಾಮ.

ವಿಭೀಷಣ ಕಂಡ ಸಂಭಾವಿತ,
ಸೀತೆಯ ಮೆಚ್ಚಿನ ಮನ್ಮಥ,
ಶ್ರೀ ರಾಮ.
ದಶರಥನ ಮುದ್ದಿನ ಮಗನು,
ರಾವಣನ ಕೊಂದ ಶೂರನು,
ಶ್ರೀ ರಾಮ.

ವಾಲ್ಮೀಕಿ ಬರೆದರು ರಾಮಾಯಣ.
ಭಕ್ತರು ನಡೆಸಿದರು ಪಾರಾಯಣ.

ಸಕಲ ಜೀವರಾಶಿಗಳ ಕಾಪಾಡು ಪ್ರಭುವೇ.
ಸರ್ವೇ ಜನಾಃ ಸುಖಿನೋ ಭವಂತು.
      ----ಚಿನ್ಮಯಿ

ಅಂಜನಿ ಸುತ ನಮೋ ನಮಃ

ಹನುಮನ ನಂಬಿರೋ, ನಿಜಗುಣ ವಾನರನ ನಂಬಿರೋ,
ಹನುಮನ ಪೂಜಿಸೋ, ಭಯಭಕ್ತಿ ಶ್ರದ್ಧೆಯಿಂದ ಪೂಜಿಸೋ.

ರಾಮಬಂಟ, ಭಕ್ತಿಯ ಪಥ ಇವನೇ.
ಧೀರವಂತ, ಭಕ್ತಿಯ ಸುಧೆ ಇವನೇ.
ಶಿವನ ಅಂಶ, ಚಿರಂಜೀವಿ ಇವನೇ.
ದೈವದ ಕಲಶ, ಸಂಜೀವಿನಿ ಇವನೇ.

ವಾಯುಪುತ್ರರಾದ ಹನುಮ ಹಾಗು ಬಲ ಭೀಮ ಸಹೋದರರು.
ಬಲ ಭೀಮನ ಸೊಕ್ಕನ್ನು ಅಳಿಸಿ ಅವನ ಸೋಲಿಸಿದ ವೀರನಿವನು.
        ----ಚಿನ್ಮಯಿ

ಅತೀ ಸಂತೋಷವು ಹಾಗೂ ಅತೀ ದುಃಖವು ಪ್ರಮಾದಕರವು

ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿದರೆ, ಸಮತೋಲನದಲ್ಲಿರುವುದು ಬದುಕಿನ ಬಂಡಿ.
ಸಮತೋಲನ ಹೆಚ್ಚುಕಡಿಮೆ ಆದರೆ, ಕಳಚಿ ಹೋಗುವುದು ಬದುಕಿನ ಕೊಂಡಿ.
             ----ಚಿನ್ಮಯಿ

ಮುಸ್ಸಂಜೆಯ ಆಗಮನ

ತಿಳಿ ಸಂಜೆಯ ವೇಳೆ ಸಿಹಿ ಗಾಳಿಯು ಮಾತನಾಡುತ್ತಿರಲು,
ಮರ ಗಿಡಗಳು ಗಾಳಿಯ ಜೊತೆ ಸರಸವಾಡುತ್ತಿರಲು,
ಎಳೆ ಹರೆಯದ ವೃದ್ಧರು ನಗು ನಗುತಾ ಇರಲು,
ಮುದ್ದಾದ ಪುಟಾಣಿಗಳು ಸಂತೋಷದಿ ಆಟವಾಡುತ್ತಿರಲು,
ಸೂರ್ಯನು ಮೆಲ್ಲನೆ ಜಾರಿದನು, ಚಂದ್ರನಿಗೆ ಆಹ್ವಾನ ನೀಡಿದನು.
            ----ಚಿನ್ಮಯಿ

ಕರೆಯೋಲೆಯ ಕಥೆ

ನಿನ್ನ ಮಾತಿನ ಮಾಧುರ್ಯ ಕರಣಗಳಿಗೆ ಇಂಪು,
ಕುಡಿನೋಟ ಸುಂದರಿಯೇ ನಿನ್ನ ನಗು ಕಣ್ಣಿಗೆ ತಂಪು.
ಜೇನಿನ ಧ್ವನಿ ಮುದ್ರಣ ಆಗಸದ ಸುತ್ತಲೆಲ್ಲಾ,
ಅದ ಸವಿಯಲು ಕಾಯುತ್ತಿಹೆನು ಹಗಲಿರುಳೆಲ್ಲಾ.
ನಿನಗಾಗಿಯೇ ಬರೆದ ನಾನು ಈ ಕರೆಯೋಲೆ,
ಸ್ವೀಕರಿಸಿ ಹಲವೊಮ್ಮೆ ಓದು ಬದಿಗಿಟ್ಟು ಕಿವಿಯೋಲೆ.
          ----ಚಿನ್ಮಯಿ

ನನ್ನಯ ದೇವಕನ್ಯೆ

ನೀನೊಂದು ಸಾಗರದಡಿ ಅಡಗಿರುವ ಹರಳು,
ನೀನೆಂದು ಚಿಗುರಿನ ಹೂವಿನಂತೆ ಅರಳು.
ಕ್ಷೀರಸಾಗರದಲ್ಲಿ ಮಿಂದೆದ್ದಾ ಸೌಂದರ್ಯ ಕನ್ಯೆಯಂತೆ ನೀ ಸಾಗಲು,
ಆ ದೃಶ್ಯ ವೀಕ್ಷಣೆಯಿಂದ ನನ್ನ ನಯನಗಳೇ ಮರುಳು.

ದೇವಲೋಕದಿಂದ ನೀ ಸೀದ ನನ್ನೆಡೆಗೆ ಬಂದಂತೆ ಭಾಸವಾಗಲು,
ನಾ ದೇವನೋ ಮನುಷ್ಯನೋ ಎಂಬುದು ಅರಿಯದೆ ನಾನು ದಿಗ್ಭ್ರಾಂತಿ!
ಒಂದು ಕ್ಷಣ ಮೈಮರೆತಂತೆ ಕಣ್ಣು ತೆರೆದಾಗ ನೀ ಎದುರಿಗೆ ಕುಂತಿರಲು,
ನನಗರಿಯಿತಾಗ ನೀ ದೇವತೆ ಈ ದೇವನ ಬಳಿ ಬಂದಿರುವೆ ಪಡೆಯಲು ವಿಶ್ರಾಂತಿ.
                 ----ಚಿನ್ಮಯಿ

ಜೀವನ ಪಾಠ

ವಿದ್ಯೆ ಜೊತೆ ವಿನಯ ಹಾಗೂ ಬುದ್ಧಿ ಜೊತೆ ಸಹನೆ ಇರುವವರಿಗೆ ಮಾತ್ರ ಬ್ರಹ್ಮಾಂಡದಲ್ಲಿ ಶ್ರೇಷ್ಠ ಸ್ಥಾನ.
            ----ಚಿನ್ಮಯಿ

Wednesday, April 22, 2020

ಪ್ರೇಮ ಲೇಖನ

ಪ್ರೇಮ ಲೇಖನ ಬರೆಯಲು ಶಾಯಿಗೆ ಬೇಕಿಲ್ಲ ಅನುದಾನ.
ಬರೆದ ಲೇಖನ ಓದಲು ನಿನಗೆ ಮಾಡಬೇಕಿಲ್ಲ ಸಂಧಾನ.
                ----ಚಿನ್ಮಯಿ