|
ಚಿತ್ರಕ್ಕೆ ಪದ್ಯ / ಉಲ್ಲೇಖ- ೮೫
|
ಸಕಲ ಬ್ರಹ್ಮಾಂಡಗಳ ಪರಮಾತ್ಮ ಹಾಗೂ ಎನ್ನ ನಲ್ಮೆಯ-ಆರಾಧ್ಯ ದೈವ ಶ್ರೀ ಮಹಾ ವಿಷ್ಣುವಿನ ೨೪ ಅವತಾರಗಳಲ್ಲಿ ಬಹಳ ಪ್ರಮುಖ ಅವತಾರಗಳು ದಶಾವತಾರಗಳು...
ಅವುಗಳ ಹೆಸರು, ಅವುಗಳೆಲ್ಲವೂ ಯಾವೆಲ್ಲಾ ಯುಗಗಳಲ್ಲಿ ನಡೆದಿದೆ ಹಾಗೂ ಅವುಗಳಿಂದ ಸಕಲರ ಜೀವನಕ್ಕೆ ತಾತ್ಪರ್ಯಗಳು, ಅವುಗಳ ಕುರಿತಾಗಿ ಸಂಪೂರ್ಣ ಮಾಹಿತಿ ಕೆಳಗಿನಂತಿವೆ—
೧) ಸತ್ಯಯುಗ (ಕೃತಯುಗ / ಸುವರ್ಣ ಯುಗ)
೧) ಮತ್ಸ್ಯ:
ಇಡೀ ಬ್ರಹ್ಮಾಂಡಗಳಲ್ಲಿ ಜೀವಿಗಳ ಸೃಷ್ಟಿ ಮೊಟ್ಟಮೊದಲಿಗೆ ನೀರಿನಲ್ಲೇ ಶುರುವಾಗಿದ್ದು ಅನ್ನೋದು ಎಲ್ಲರಿಗೂ ತಿಳಿದ ವಿಚಾರವೇ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಮನುಷ್ಯ ಕುಲದ ಉಗಮದ ಮೂಲ ಕರ್ತೃಕಾರನಾದ 'ಮನು'ವನ್ನು ಹಾಗೂ ಸಪ್ತ ಋಷಿಗಳನ್ನು ಮಹಾಪ್ರಳಯದಿಂದ ಒಂದು ಬೃಹತ್ತಾಕಾರದ ಮೀನು ಪಾರುಮಾಡುವುದು, ಇದರಿಂದಲೇ ಎಲ್ಲಾ ಮನುಷ್ಯರು ಆಗಿನಿಂದಲೂ-ಈಗಿನವರೆಗೂ ಜೀವಿಸುತ್ತಿರುವುದು, ಇನ್ನೂ ಮುಂದೆಯೂ ಜೀವಿಸುವುದೇ ತಾತ್ಪರ್ಯವು. ಇದರಲ್ಲಿ ಕರ್ಮಸ್ಥಾಪನೆಯಿಂದಲೇ ಧರ್ಮಸ್ಥಾಪನೆಯಾಗಿದೆ.
೨) ಕೂರ್ಮ:
ನೀರಿನ ಜೀವಿಗಳ ಸೃಷ್ಟಿಯ ನಂತರ ನೀರು ಹಾಗೂ ನೆಲ ಎರಡರ ಮೇಲೂ ಜೀವಿಸಬಲ್ಲ ಜೀವಿಗಳ ಸೃಷ್ಟಿಯ ವಿಚಾರವು ಸಹ ಎಲ್ಲರಿಗೂ ತಿಳಿದಿದೆ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಬೃಹತ್ತಾಕಾರದ ಆಮೆಯ ಸಹಾಯದಿಂದ ಸಮುದ್ರ ಮಂಥನವು ನಡೆಯುವುದು, ಅದರಿಂದ ಹಾಲಾಹಲ, ಕೌಸ್ತುಭ, ಚಂದ್ರ, ಲಕ್ಷ್ಮಿ, ಅಪ್ಸರೆಯರು, ಕಾಮಧೇನು, ಪಾರಿಜಾತ, ಐರಾವತ, ಧನ್ವಂತರಿ, ಶಂಖ, ತುಳಸಿ, ಅಮೃತ ಹಾಗೂ ಮುಂತಾದವುಗಳು ಜನಿಸಿದರಿಂದ ಜಗವು ಸಾಗಲೆಂಬುದೇ ತಾತ್ಪರ್ಯವು. ಇದರಲ್ಲಿಯೂ ಕರ್ಮಸ್ಥಾಪನೆಯಿಂದಲೇ ಧರ್ಮಸ್ಥಾಪನೆಯಾಗಿದೆ.
೩) ವರಾಹ:
ನೀರಿನ, ನೀರು-ನೆಲದ ಜೀವಿಗಳ ನಂತರ ನೆಲದಲ್ಲಿ ಮಾತ್ರ ವಾಸಿಸುವ ಜೀವಿಗಳ ಸೃಷ್ಟಿಯ ಕುರಿತು ಎಲ್ಲರಿಗೂ ತಿಳಿದ ವಿಚಾರವೇ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಸೂರ್ಯನ ಹಿಡಿತದಿಂದ ಭೂ ದೇವಿಯನ್ನು ಓರ್ವ ಹಿರಣ್ಯಾಕ್ಷ ಎಂಬ ರಾಕ್ಷಸನು ದೂರಮಾಡುವನೋ, ಮತ್ತೊಮ್ಮೆ ಸೌರಮಂಡಲದ ಸಮತೋಲನಕ್ಕೆಂದಲೇ ಅವನೊಡನೇ ಹಂದಿಯೊಂದು ಸೆಣಸಾಡಿ ಗೆದ್ದು ತನ್ನ ಎರಡು ಮುಂಗಡ ಹಲ್ಲುಗಳ ಮೇಲೆ ಭೂ ದೇವಿಯನ್ನ ತಿರುಗಿಸುತ್ತಲೇ ತಂದು ಸಮತೋಲನ ಸರಿಮಾಡುವುದೆಂಬುದೇ ತಾತ್ಪರ್ಯವು. ಇದರಲ್ಲಿ ಸೃಷ್ಟಿಯ ಲಯಕ್ಕೋಸ್ಕರ ಧರ್ಮಸ್ಥಾಪನೆಯಾಗಿದೆ.
೪) ನರಸಿಂಹ:
ನೆಲದ ಜೀವಿಗಳ ಸೃಷ್ಟಿಯ ನಂತರ ಮಂಗಗಳ ಜಾತಿಯಿಂದ ಮಾನವ ರೂಪೀಕರಣವು ಕೊಂಚ ಕೊಂಚವೇ ಹೇಗೆ ಶುರುವು ಎಂಬುದು ಪರೋಕ್ಷವಾಗಿ ಅರ್ಧ ಸಿಂಹ-ಅರ್ಧ ಮನುಷ್ಯನ ರೂಪದಲ್ಲಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಮ್ಮನಾದ ಹಿರಣ್ಯಾಕ್ಷನ ಸೇಡು ತೀರಿಸಿಕೊಳ್ಳಲು ಜಿದ್ದು ಬಿದ್ದ ಓರ್ವ ಹಿರಣ್ಯ ಕಶಿಪು ಎಂಬ ರಾಕ್ಷಸನ ವಧೆ ಅವನ ಸ್ವಂತ ಮಗನಾದ ಮಹಾವಿಷ್ಣುವಿನ ಮಹಾ ಭಕ್ತನಾದ ಪ್ರಹ್ಲಾದನ ಸಹಾಯದಿಂದ ಹಾಗೂ ಆ ರಾಕ್ಷಸನ ಅತೀ ಬುದ್ಧಿವಂತಿಕೆಯ ವರಗಳನ್ನು ತಪ್ಪಿಸಿ ಆಗುವುದೆಂಬುದೇ ತಾತ್ಪರ್ಯವು. ಇದರಲ್ಲಿ ಸಂಬಂಧಗಳಿಂದ ಮೂಢರಾದ ಅಧರ್ಮಿಗಳ ನಾಶದಿಂದ ಧರ್ಮಸ್ಥಾಪನೆಯಾಗಿದೆ.
೨) ತ್ರೇತಾಯುಗ
೫) ವಾಮನ:
ಮಂಗಗಳಿಂದ ನಿಧಾನವಾಗಿ ಅದೇಗೆ ಸಣ್ಣಗಾತ್ರದ ಮನುಷ್ಯರ ರೂಪೀಕರಣವಾಯಿತೆಂಬುದನ್ನು ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಏಳು ಚಿರಂಜೀವಿಗಳಲ್ಲೊಬ್ಬನಾದ ಹಾಗೂ ರಾಕ್ಷಸ ಜಾತಿಗಳ ಒಡೆಯನಾದ ಓರ್ವ ಮಹಾಬಲಿಯು ಸ್ವರ್ಗಾಧಿಪತಿಯಾದ ಇಂದ್ರ ದೇವನ ಸೋಲಿಸಿ ತ್ರಿಲೋಕಗಳಧಿಪತಿಯಾಗಿ ಮೆರೆಯುವ ಅಹಂ ಅನ್ನು ಇಳಿಸಿ ತನ್ನ ಮೂರೆಜ್ಜೆಗಳನ್ನಿರಿಸಲು ಜಾಗ ಕೇಳಿದಾಗ ವಿಷ್ಣುವಿನ ಮಹಾಭಕ್ತನಾದ ಮಹಾಬಲಿಯು ತನ್ನೆರಡೆಜ್ಜೆಗಳನ್ನು ಎರಡೂ ಲೋಕಗಳಲ್ಲಿರಿಸಲು ದಾನ ನೀಡಿದನು ಹಾಗೆಯೇ ಸ್ವರ್ಗವನ್ನು ಪುನಃ ಇಂದ್ರನಿಗೇ ಹಿಂತಿರುಗಿಸಲು ವಾಮನ ಸಹಾಯ ಮಾಡಿದನು ಮತ್ತು ಕೊನೆಯ ಹೆಜ್ಜೆಗೆ ತನ್ನ ತಲೆಯನ್ನು ದಾನ ಮಾಡಿದನು ಇದರಿಂದಲೇ ಮಹಾಬಲಿಯನ್ನು ಖಾಯಂ ಪಾತಳಕ್ಕೆ ಕಳುಹಿಸೋ ಬಹಳ ಸಣ್ಣ ಗಾತ್ರದ ಮನುಷ್ಯನ್ನೊಬ್ಬನ ಮಹಾ ಪರಾಕ್ರಮದ ವಿಚಾರವೇ ತಾತ್ಪರ್ಯವು. ಇದರಲ್ಲಿ ಅಹಂ ಇಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೬) ಪರಶುರಾಮ:
ಮಂಗಗಳಿಂದ ಮನುಷ್ಯ ನಿಧಾನವಾಗಿ ರೂಪೀಕರಣವಾದ ನಂತರ ಅದೇಗೆ ಅರಣ್ಯದಲ್ಲಿ ಜೀವಿಸಲಾರಂಭಿಸಿದ, ಶಸ್ತ್ರಾಸ್ತ್ರಗಳನ್ನು ತಯಾರಿ ಮಾಡುವುದನ್ನು, ಅದರ ಬಳಕೆ ಹೇಗೆ ಕಲಿತನೆಂಬುದು ಹಾಗೂ ಪ್ರಾಣಿಯಿಂದ ರೂಪೀಕರಣವಾದ್ದರಿಂದ ವಿಪರೀತ ಕೋಪವೇಗೆ ಇತ್ತೆಂಬುದು ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಂದೆಯ ಆಜ್ಞೆಯಂತೆಯೇ ಸ್ವಂತ ತಾಯಿಯಾದ ರೇಣುಕಾಳ ತಲೆ ಕಡಿದನು, ಮಗನ ಸದ್ಯಃಪಿತೃವಾಕ್ಯಪರಿಪಾಲನಾ ಬುದ್ಧಿಯನ್ನು ಕಂಡು ಸಂತೃಪ್ತನಾದ ಜಮದಗ್ನಿ ವರವೊಂದನ್ನು ಕೇಳಿಕೊಳ್ಳಲು ಹೇಳಲು ಆತ ತನ್ನ ಪ್ರಿಯಮಾತೆಯನ್ನು ಮತ್ತೆ ಬದುಕಿಸಬೇಕೆಂದೂ ಇನ್ನು ಮುಂದೆ ಇಂಥ ಉಗ್ರಕೋಪ ಪ್ರದರ್ಶನವನ್ನು ಬಿಟ್ಟುಬಿಡಬೇಕೆಂದೂ ಬೇಡಿಕೊಂಡ, ರೇಣುಕಾ ಮಾತೆ ಬದುಕಿದಳು ಹಾಗೂ ಕಾಮಧೇನುಗೋಸ್ಕರ ಅಧರ್ಮದಿ ತನ್ನ ತಂದೆಯ ಕೊಂದ ಓರ್ವ ಕ್ಷತ್ರಿಯನಾದ ಕಾರ್ತವೀರ್ಯಾರ್ಜುನನ ಕೊಂದು ತದನಂತರ ಇದಕ್ಕೆ ಪ್ರತೀಕಾರವಾಗಿ ಭೂಮಿಯ ಮೇಲಿನ ಎಲ್ಲಾ ಕ್ಷತ್ರಿಯರನ್ನು ೨೧ ಬಾರಿ ಮಾರಣಹೋಮ ನಡೆಸುವುದಾಗಿ ಪ್ರತಿಜ್ಞೆ ಮಾಡಿ ೨೧ ಬಾರಿ ಮಾರಣಹೋಮ ನಡೆಸಿ ಕೊನೆಗೆ ಶಾಂತನಾಗಿ ರಾಮ-ಕೃಷ್ಣರಿಗೇ ಪರೀಕ್ಷೆ ಮಾಡಿ ಅದೆಷ್ಟೋ ಕ್ಷತ್ರಿಯರಿಗೆ ತ್ರೇತಾಯುಗದಿಂದ-ದ್ವಾಪರಯುಗ-ಕಲಿಯುಗದವರೆಗೂ ತರಬೇತುಗಾರನಾಗಿ ಜೀವಿಸುತ್ತಿರುವ ಹಾಗೂ ಹತ್ತನೇ ಹಾಗೂ ಅಂತಿಮ ಅವತಾರವಾದ ಕಲಿಯುಗದ ಕಲ್ಕಿಯ ಗುರುವಾಗಿ ಮತ್ತೆ ಕಾಣಿಸಿಕ್ಕೊಳ್ಳುವ ಏಳು ಚಿರಂಜೀವಿಯರಲ್ಲೊಬ್ಬನಾದ ಸಾಕ್ಷಾತ್ ಮಹಾದೇವನ ಶಿಷ್ಯನಾದ ಓರ್ವ ಮಹಾಕ್ಷತ್ರಿಯನ ಯಶೋಗಾಥೆಯೇ ತಾತ್ಪರ್ಯವು. ಇದರಲ್ಲಿಯೂ ಅಹಂ ಇಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೭) ರಾಮ:
ಮನುಷ್ಯ ಪರಿಪೂರ್ಣತೆಗೊಳಗಾಗಿ ಹೇಗೆ ಬೆಳೆಯುವನೆಂಬುದರ ಕುರಿತಾಗಿ ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಂದೆಯಾದ ದಶರಥನ ಆಜ್ಞೆಯಂತೆಯೇ ಪಿತೃವಾಕ್ಯಪರಿಪಾಲನೆಗೋಸ್ಕರ ಹಾಗೂ ತನ್ನ ಚಿಕ್ಕಮ್ಮನ ದುರಾಲೋಚನೆಯ ಆಸೆಯಂತೆ ಎಲ್ಲಾ ರಾಜ್ಯ ಸುಖಗಳು-ಐಭೋಗಗಳನ್ನು ತ್ಯಜಿಸಿ ಪ್ರೀತಿಯ ತಮ್ಮ ಆದಿಶೇಷನವತಾರಿಯಾದ ಲಕ್ಷ್ಮಣ-ಮಡದಿ ಜಾನಕಿಯೊಂದಿಗೆ ವನವಾಸದೆಡೆಗೆ ಪಯಣ ಸಾಗಿಸಿ ಅದೆಷ್ಟೋ ಕಷ್ಟ ಅನುಭವಿಸಿ ಕೊನೆಗೆ ತನ್ನ ಪ್ರಿಯ ಹೆಂಡತಿಯನ್ನು ಪರಸ್ತ್ರೀಯಂದೂ ಕಾಣದೇ ಅಧರ್ಮದಿ ಮೋಹ-ಕಾಮಾಪೇಕ್ಷೆಯಿಂದ ಅಪಹರಿಸಿ ತನ್ನಧೀನದಲ್ಲಿರಿಸಿಕೊಂಡಿದ್ದ ಓರ್ವ ಮಹಾ ಬ್ರಾಹ್ಮಣ-ಪರಶಿವನ ಮಹಾಭಕ್ತನಾದ-ರಾಕ್ಷಸನಾದ ರಾವಣನನ್ನು ತನ್ನ ಅಯೋಧ್ಯೆಯ ಸೇನೆ ಸಹಾಯದ ಅಪೇಕ್ಷೆಯಿಲ್ಲದೇ ತನ್ನ ಪ್ರಿಯ ತಮ್ಮನಾದ ಲಕ್ಷ್ಮಣನ, ಸುಗ್ರೀವನ ವಾನರ ಸೇನೆಯ, ಮಹಾವೀರ-ರಾಮನ ಮಹಾಭಕ್ತ-ಏಳು ಚಿರಂಜೀವಿಯರಲ್ಲೊಬ್ಬನಾದ ರಾಮಭಂಟ ಹನುಮಂತನ, ಇನ್ನೋರ್ವ ಚಿರಂಜೀವಿಯಾದ ರಾವಣನ ತಮ್ಮನಾದ ವಿಭೀಷಣನ ಸಹಾಯದಿಂದ ಕೊಂದು ಸಕಲ ಸ್ತ್ರೀ ಕುಲದ ರಕ್ಷಣೆಯೆಂದೇ ಭಾವಿಸಿ ಮಾತೆ ಸೀತೆಯನ್ನು ರಾವಣನ ಲಂಕೆಯಿಂದ ಬಿಡುಗಡೆ ಮಾಡಿ ಅಯೋಧ್ಯೆಗೆ ಮರಳಿ ರಾಜನಾದನು, ಮಹಾ ವಿಷ್ಣುವಿನ ಪೂರ್ಣಾವತಾರನಾಗಿಯೂ ಸಹ ಮನುಷ್ಯನಾಗಿ ಭೂಮಿ ಮೇಲೆ ಹುಟ್ಟಿದ ಮೇಲೆ ಕಷ್ಟ ತಪ್ಪದೆಂಬುದು ವಿಧಿಯ ತಾಳಕ್ಕೆ ತಕ್ಕಂತೆ ಜೀವಿಸಲೇಬೇಕೆಂಬುದನ್ನು ತೋರಿಸಿ, ತಂದೆಗೆ ತಕ್ಕ ಮಗನಾಗಿ, ತಂದೆಯಾಗಿ, ಸಂಬಂಧಿಕನಾಗಿ, ಏಕ ಪತ್ನಿಯ ಪತಿಯಾಗಿ-ಸೀತೆಯ ರಾಮನಾಗಿ, ರಾಜನಾಗಿ, ಬಹಳ ಮುಖ್ಯವಾಗಿ 'ಮರ್ಯಾದ ಪುರುಷೋತ್ತಮ'ನಾಗಿ ಬಾಳಿ ಎಲ್ಲರಿಗೂ ಮಾದರಿಯಾದ ಓರ್ವ ಮಹಾಪುರುಷನ ಯಶೋಗಾಥೆಯನ್ನೇ ಮನುಷ್ಯರೆಲ್ಲರಿಗೂ ಆದರ್ಶವಾಗಲೆಂದು ವಾಲ್ಮೀಕಿಯು ಬರೆದನು 'ರಾಮಾಯಣ'- ಅದುವೇ ತಾತ್ಪರ್ಯವು. ಇದರಲ್ಲಿ ಹೆಣ್ಣಿನ ವ್ಯಾಮೋಹದಿಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೩) ದ್ವಾಪರಯುಗ
೮) ಕೃಷ್ಣ:
ಪರಿಪೂರ್ಣತೆಯೊಡನೆ ಅನಂತ ಬುದ್ಧಿವಂತಿಕೆಯ ಒಡೆಯನಾಗಿ ಬೆಳೆಯುವ ಮನುಷ್ಯನ ಕುರಿತಾಗಿ ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ಜನ್ಮ ಕೊಟ್ಟವರಾದ ದೇವಕಿ-ವಸುದೇವರೊಡನೆ ಒಂದು ಕ್ಷಣ ಕಳೆಯದೆ-ಬಾಲ್ಯ ಕೂಡ ಕಳೆಯದೆ, ತನ್ನನ್ನು ಹೆರದಿದ್ದರೂ ಸ್ವಂತ ತಾಯಿಯಾಗೇ ಪ್ರೀತಿ ಕೊಟ್ಟು ಸಾಕಿ ಬೆಳೆಸಿದ ಯೊಶೋಧೆಯ ತುಂಟ ಕೃಷ್ಣನಾಗಿ ಬಾಳಿ, ತಾನು ಪ್ರೀತಿಸಿದವಳಾದ ರಾಧೆಯೊಡನೆ ಮದುವೆ ಆಗದಿದ್ದರು ಅನಂತ ಪ್ರೇಮಕಥೆಯ ಪಾತ್ರಧಾರಿಯಾಗಿ ರಾಧೆಯ ಕೃಷ್ಣನಾಗಿ ಜೀವಿಸಿದ, ತನ್ನ ಎಂಟು ಪ್ರಿಯ ಪತ್ನಿಗಳೊಡನೆ ಪ್ರಿಯ ಪತಿಯಾಗಿ ಜೀವಿಸಿದ, ೧೬೦೦೦ ಸ್ರ್ತೀಯರನ್ನು ನರಕಾಸುರನ ವಧಿಸಿ ಕಾಪಾಡಿ ಸಮಾಜ ಅವರನ್ನು ಸ್ವೀಕರಿಸದಿದ್ದಾಗ ಪ್ರೀತಿಯಿಂದಲೇ ಅವರೆಲ್ಲರನ್ನೂ ಸಖಿಯರನ್ನಾಗಿಸಿ ಆಶ್ರಯ ನೀಡಿದ, ತನ್ನ ಪ್ರಿಯ ಅಣ್ಣನಾದ ಆದಿಶೇಷನವತಾರಿಯಾದ ಬಲರಾಮನೊಡನೆ ಜೀವಿಸಿದ, 'ಮಹಾಭಾರತ'ದಂತಹ ಮಹಾದೃಶ್ಯಕಾವ್ಯವನ್ನು ಜಗಕ್ಕೇ ಪರಿಚಯಿಸಿ, ಪಾಂಡವರ ಆಪ್ತನಾಗಿ ಬಾಳಿದ, ಒಡಹುಟ್ಟಿದವಳಲ್ಲದಿದ್ದರೂ ತನ್ನ ತಂಗಿಯಾದ ದ್ರೌಪದಿಯ ರಕ್ಷಣೆಯು ಇಡೀ ಸ್ತ್ರೀ ಕುಲದ ನ್ಯಾಯ ರಕ್ಷಣೆಯಂದೇ ಭಾವಿಸಿ ಧರ್ಮಸ್ಥಾಪನೆಗೋಸ್ಕರ ಸ್ವಂತವರೆಂದೂ ಕಾಣದೇ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ ಮಧ್ಯ ಪಾಂಡವನಾದ ಆಪ್ತ ಅರ್ಜುನನ ಸಾರಥಿಯಾಗಿಯೇ ಧರ್ಮಯುದ್ಧವನ್ನೇ ಮುನ್ನೆಡೆಸಿ, ಅವನಿಗೆ ನಡೆಯುತ್ತಿರುವುದರ ಕುರಿತಾಗಿ ಕಳವಳವಿದ್ದಾಗ ಯುದ್ಧಭೂಮಿಯಲ್ಲಿಯೇ ಭಗವದ್ಗೀತೆಯ ಸಾಕ್ಷಾತ್ಕಾರಗೊಳ್ಳಿಸಿ ಹಾಗೆಯೇ ಕಲಿಯುಗದ ಜನರಿಗೆಲ್ಲರಿಗೂ ದಾರಿದೀಪವಾಗುವಂತೆ ಮುಂಗಡವಾಗಿಯೇ ಮಾಡಿ, ತನ್ನನಂತ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿ ಸತ್ಯದರಿವನ್ನು ಮೂಡಿಸಿ, ಕೊನೆಗೆ ಎಲ್ಲಾ ಮಹಾ ಯೋಧರನ್ನೂ ನಿಮಿತ್ತ ಮಾಡಿ ಮಹಾಯುದ್ಧದಲ್ಲಿ ಹೋರಾಡದಿದ್ದರೂ ಕೊನೆಗೆ ಅಧರ್ಮಿ ದುರ್ಯೋಧನನನ್ನು ಎರಡನೇ ಪಾಂಡವನಾದ ಬಲ ಭೀಮನ ಕೈಯಲ್ಲಿ ಕೊಲ್ಲಿಸಿ ಧರ್ಮವನ್ನೇ ಜಯಭೇರಿಯಾಗಿಸಿ, ಹುಟ್ಟಿದಾಗಿಂದಲು ಸಾವನ್ನು ತನ್ನ ಸ್ವಂತ ಸೋದರ ಮಾವನಾದ ಕಂಸನ ರೂಪದಲ್ಲೇ ಹೆದುರಿಸಿ, ಹೆಗಲೇರಿಸಿಕೊಂಡೇ ಬಾಳಿ ಕೊನೆಗೆ ಅವನನ್ನ ಕೊಂದು, ತನ್ನ ವಂಶಸ್ಥರಾದ ಯದುವಂಶಿಗಳನ್ನು ಗಾಂಧಾರಿಯ ಶಾಪದ ನಿಮಿತ್ತವಾಗಿ ಅವರವರೇ ನಾಶ ಮಾಡಿಕೊಳ್ಳೋ ಹಾಗೆ ಮಾಡಿ, ಕೊನೆಗೆ ರಾಮನು ವಾಲಿಯನ್ನ ಹಿಂದೆಯಿಂದ ಕೊಂದ ಕರ್ಮಕ್ಕೆ ಈ ಜನ್ಮದಲ್ಲಿ ವಾಲಿಯು ಬೇಟೆಗಾರನಾದ ಜಾರನಾಗಿ ತಾನು ದೇವರಾದರೂ ತನ್ನನ್ನು ಕೊಲ್ಲೋ ಹಾಗೇ ಮಾಡಿ ಕರ್ಮ ಸಿದ್ಧಾಂತದ ಕುರಿತಾಗಿ ತಿಳಿಸಿ, ತಾನು ಮಹಾವಿಷ್ಣುವಿನ ಪೂರ್ಣಾವತಾರವಾದರೂ ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ತಪ್ಪದೆಂಬುದು ವಿಧಿಯ ತಾಳಕ್ಕೆ ಕುಣಿಯಲೇಬೇಕೆಂದು ಆದರೇ ಅದನ್ನ ಹೇಗೆಲ್ಲಾ ಹೆದುರಿಸಿ ಹೋರಾಡಬೇಕೆಂಬುದನ್ನು ತೋರಿಸಿ ತಾನು ಭೂಮಿಗೆ ಬಂದ ಕಾರ್ಯ ಮುಗುಸಿ, 'ಸಕಲ ಜಗಗಳ ಮಹಾಗುರು'ವಾದ, 'ಯುಗಯುಗಳ ಮಹಾಪುರುಷ'ನಾದ ಕೃಷ್ಣನ ಯಶೋಗಾಥೆಯನ್ನೇ 'ಮಹಾಭಾರತ'ವಾಗಿ ಭಗವಂತ ಶಿವನ ಮಗನಾದ ವಿದ್ಯಾಧಿಪತಿಯಾದ ಗಣೇಶನ ಕೈ ಬರಹದಲ್ಲಿ ಬರೆಸಿದನು ವೇದವ್ಯಾಸನು- ಅದುವೇ ತಾತ್ಪರ್ಯವು. ಇದರಲ್ಲಿ ಮನುಷ್ಯನ ಅಹಂ, ಹೆಣ್ಣಿನ-ಮಣ್ಣಿನ ವ್ಯಾಮೋಹಕ್ಕೊಳಗಾದ ರಕ್ತ ಸಂಬಂಧಿಕರಾದರೂ ಸಹ ಅಧರ್ಮ ಮಾಡಿದವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೪) ಕಲಿಯುಗ (ಕರಾಳಯುಗ)
೯) ಬುದ್ಧ:
ಮನುಷ್ಯ ಅತೀ ಬುದ್ಧಿವಂತನಾಗಿ ಅವನಲ್ಲಿ ಕ್ರೂರ ಹೆಚ್ಚಾದಾಗ ತಾಳ್ಮೆ, ಧರ್ಮ, ಶಾಂತಿಯ ಬೀಜ ಮರಳಿ ಅವನಲ್ಲಿ ಬಿತ್ತುವ ಪ್ರಯತ್ನವು ಪರೋಕ್ಷವಾಗಿ ತೋರಿಸಿರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಕಲಿಯುಗದ ರಾಜನಾದ ಮನುಷ್ಯರ ಒಳರಾಕ್ಷಸ ಕಲಿಯ ಪ್ರಭಾವದಿಂದ ವೇದ-ಪುರಾಣ-ಉಪನಿಷತ್ಗಳ ಮೇಲೆ ಜನರಿಗೆ ನಂಬಿಗೆ ಹೋದಾಗ ಶಾಂತಿ, ತಾಳ್ಮೆ ದಾರಿಯಲ್ಲಿ ಅವರನ್ನು ದಾರಿಗೆ ತರಲೆಂದೇ ಮಹಾ ವಿಷ್ಣು ಈ ಅವತಾರ ತಾಳಿದ ಹಾಗೂ ಅದುವೇ ಹಾಗಿದೆ ಈ ಅವತಾರದ ತಾತ್ಪರ್ಯವು. ಇದರಲ್ಲಿ ಮನುಷ್ಯನ ಎಲ್ಲಾ ದುರ್ಗುಣಗಳ ಒಳಗಿನಿಂದಲೇ ನಶಿಸಿ ಅವನಲ್ಲಿರೋ ಅಧರ್ಮ ನಾಶಮಾಡಿ ಧರ್ಮಸ್ಥಾಪನೆಯಾಗಿದೆ.
೧೦) ಕಲ್ಕಿ:
ಮನುಷ್ಯರ ಬುದ್ಧಿವಂತಿಕೆಯು ಅತಿರೇಕದ ಮಿತಿಮೀರಿದಾಗ, ಕಲಿಯುಗದ ರಾಜನಾದ ಮನುಷ್ಯರ ಒಳರಾಕ್ಷಸ ಕಲಿಯ ಅತೀವ ಪ್ರಭಾವದಿಂದ ಮಾನವೀಯತೆಯ ಗುಣಗಳನ್ನೇ ಮನುಜನು ಕಳೆದುಕೊಂಡು ಬಾಳುವಾಗ ಬುದ್ಧನ ಜ್ಞಾನದಿಂದ ಮೊದಲು ಸರಿಮಾಡೋ ಪ್ರಯತ್ನ ನಂತರ ಕೃಷ್ಣನ ಭಗವದ್ಗೀತೆಯಿಂದ ಸರಿಮಾಡೋ ಪ್ರಯತ್ನದ ಕುರಿತಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಕಾಲ ಸರಿದಂತೆ ಮನುಷ್ಯನ ಸ್ವಂತ ಶತ್ರುವಾದ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ಜಯಿಸಲಾರಂಭಿಸುವುದೋ, ನಂತರ ಈ ಯುಗದ ಕೊನೆಯಲ್ಲಿ ಇದೇ ಯುಗದ ಮಹಾ ವಿಷ್ಣುವಿನ ದಶಾವತಾರದ ಕೊನೆಯ ಅವತಾರವಾದ ಮಹಾಯೋಧ ಮಹಾಜ್ಞಾನಿ ಕಲ್ಕಿಯ ಧರ್ಮಸ್ಥಾಪನೆಗೋಸ್ಕರ ಅಧರ್ಮದ ಸರ್ವನಾಶದಿ ಯುಗಾಂತ್ಯದ ಸಿದ್ಧಾಂತ, ನಂತರ ಮರಳಿ ಸತ್ಯಯುಗ ಸ್ಥಾಪನೆ ಕುರಿತಾಗಿ ತೋರುವುದೇ ಈ ಅವತಾರದ ತಾತ್ಪರ್ಯವು. ಇದರಲ್ಲಿ ಎಲ್ಲಾ ಮನುಷ್ಯನೊಳಗೇ ನೆಲೆಸಿಹ ಕಲಿಯುಗದ ರಾಜನಾದ ಮಹಾ ಬಲಶಾಲಿ ಕಲಿಯ ಅರಿಷಡ್ವರ್ಗಗಳ ಗುಣಗಳಿಂದ ಕೂಡಿದ ಅಧರ್ಮವನ್ನು ಏಳು ಚಿರಂಜೀವಿಗಳಾದ ಅಶ್ವತ್ಥಾಮ, ಮಹಾಬಲಿ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮರ ಸಹಾಯದಿಂದ ಅದರಲ್ಲೂ ಪರಶುರಾಮನು ಕಲಿಸುವ ವಿದ್ಯೆಯಿಂದ ಕಲ್ಕಿಯು ನಶಿಸಿ ಧರ್ಮಸ್ಥಾಪನೆ ಮಾಡುವನು...
----ಚಿನ್ಮಯಿ