Thursday, August 15, 2024

ನನ್ನ ತಂದೆ ನನ್ನ ಹೆಮ್ಮೆ. ನನ್ನ ತಾಯಿ ನನ್ನ ಗೌರವ.

ಚಿತ್ರಕ್ಕೆ ಪದ್ಯ / ಉಲ್ಲೇಖ- ೮೭

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ ಮೊಟ್ಟ ಮೊದಲಿಗೆ 'ಕಾನ್ ಸ್ಟೇಬಲ್', ನಂತರ 'ಹೆಡ್ ಕಾನ್ ಸ್ಟೇಬಲ್' ಹಾಗೂ ತದನಂತರ ನಿವೃತ್ತಿ ಹೊಂದುವ ಸಮಯದಲ್ಲಿ 'ಅಸಿಸ್ಟೆಂಟ್ ರಿಸರ್ವ್‌ ಸಬ್ ಇನ್ಸ್ಪೆಕ್ಟರ್' ಆಗಿ ಸುಧೀರ್ಘ ೩೪ ವರ್ಷ ರಾಜ್ಯದ ಹೆಮ್ಮೆಯ ಪೊಲೀಸಾಗಿ ರಾಜ್ಯ ಹಾಗೂ ದೇಶಸೇವೆ ಸಲ್ಲಿಸಿದ ನಿಷ್ಠಾವಂತ ಅಧಿಕಾರಿಯು ನನ್ನ ತಂದೆ. ಅವರ ವೃತ್ತಿ ಸಮಯದಲ್ಲಿ ಎಷ್ಟೋ ಕಾಲ ಮನೆಯಿಂದ ಹೊರಗೆ ಉಳಿದಿದ್ದು ಇದೆ ಹಾಗೂ ಅದೆಷ್ಟೋ ಅನಾರೋಗ್ಯ, ಕಷ್ಟಗಳನ್ನ ಅನುಭವಿಸಿ ಕೂಡ ವೃತ್ತಿ ಧರ್ಮವ ಪ್ರಾಮಾಣಿಕವಾಗೇ ನಿರ್ವಹಿಸಿ ಗೆದ್ದ ವೀರನು ನನ್ನ ತಂದೆ. ನಿವೃತ್ತಿ ಹೊಂದೋ ಸಮಯದಲ್ಲಿ ವಾಸಿಯೇ ಆಗದಂತಹ ಬೆನ್ನಿನ ಅನಾರೋಗ್ಯದ ನಡುವೆಯೂ ಅದೆಷ್ಟೇ ನೋವಿದ್ದರೂ ಲೆಕ್ಕಿಸದೇ ತಮ್ಮ ೬೦ ವರ್ಷ ತುಂಬುವವರೆಗೂ ಸೇವೆ ಸಲ್ಲಿಸಿ ನೆಮ್ಮದಿಯಿಂದ, ಹೆಮ್ಮೆಯಿಂದ ನಿವೃತ್ತಿ ಹೊಂದರು ನನ್ನ ತಂದೆ.

ಅವರು ಬದುಕಿದ ರೀತಿಯೇ ನನಗೆ ಸ್ಪೂರ್ತಿ ಹಾಗೂ ಇಂತಹ ಯೋಧನಿಂದ ಪರೋಕ್ಷವಾಗಿ ಕಲಿತ ಜೀವನದ ಪಾಠಗಳು— ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಧರ್ಮ, ಕರ್ಮ ಇನ್ನೂ ಅನೇಕ ವಿಚಾರ-ಆಚಾರಗಳಿಂದಲೇ ನನ್ನ ಈಗಿನ ಬದುಕು ಬೆಳಗಿದೆ, ಇದಕ್ಕೆಲ್ಲದಕ್ಕೂ ಕಾರಣವಾದ ಈ ಯೋಧನಿಗೆ ನನ್ನ ಸಲಾಂ.

ಇಷ್ಟೆಲ್ಲದರ ಮಧ್ಯೆ ನನ್ನ ತಾಯಿಯ ತ್ಯಾಗ, ಕಷ್ಟ ಹಾಗೂ ಅವಳು ನಮ್ಮಪ್ಪನ ಅನುಪಸ್ಥಿತಿಯಲ್ಲಿ ನನ್ನನ್ನು ಹಾಗೂ ನನ್ನ ಅಣ್ಣನನ್ನು ಕೋಪದಿಂದಲೇ ಪ್ರೇಮ ಧಾರೆಯೆರೆದು ಬೆಳೆಸಿದ ರೀತಿಯನ್ನು ನೆನಪಿಸಿಕೊಳ್ಳಲೇಬೇಕು. ಇಂತಹ ತ್ಯಾಗಮಯಿಗೆ ನನ್ನ ಸಲಾಂ.

ಅದೇಷ್ಟೋ ಕಷ್ಟ ನೋಡಿ ಬೆಳೆದ ನಾನು-ನನ್ನಣ್ಣ ಆದರೂ ಸಹ ನಮಗೆ ಕಷ್ಟವೇ ಅನಿಸಬಾರದಂತೇ ಬೆಳೆಸಿದ ನಮ್ಮ ತಂದೆ-ತಾಯಿ, ಇವರಿಬ್ಬರೂ ಕಟ್ಟಿಕೊಟ್ಟಂತಹ ಈ ಬಂಗಾರದ ಬಾಳು ನಮಗೆ ದೀಕ್ಷೆ.

ಪ್ರತಿಯೊಂದಕ್ಕೂ ಇಬ್ಬರಿಗೂ ಸದಾಕಾಲವೂ ನಾವು ಚಿರಋಣಿ...


               ----ಚಿನ್ಮಯಿ

No comments:

Post a Comment