ಚಿತ್ರಕ್ಕೆ ಪದ್ಯ / ಉಲ್ಲೇಖ- ೯೩ |
ಕನ್ನಡ ಭಾಷೆಯದು—
"ಸರಸತಿಗೊಲುಮೆ.
ಮಹಾಲಕ್ಷ್ಮೀಗ್ಗರಿಮೆ.
ಭುವನೇಶ್ವರಿಗಿರಿಮೆ."
ಪಂಪ-ರನ್ನ-ಪೊನ್ನ—
ತ್ರಿವಳಿ ಕನ್ನಡದ್ ರತ್ನ.
ಕುಮಾರವ್ಯಾಸ-ಹರಿಹರ-ಜನ್ನ—
ಹಳಗನ್ನಡ ರಸಿಕರೆದೆಯ ಚಿನ್ನ.
ರಾಘವಾಂಕನ ಕನ್ನಡ ಕೊಡುಗೆ—
ಷಟ್ಪದಿಯೊಳ ದೈವ ಬರವಣಿಗೆ.
ಅಲ್ಲಮ-ಅಕ್ಕಮಹಾದೇವಿ-ಬಸವಣ್ಣ—
ವಚನ ಸಾಹಿತ್ಯದಿ ಜಗ ಬೆಳಗಿದ ಭಕ್ತಿ ಕಿರಣ.
ಕವಿ,ಮೇಧಾವಿ,ತತ್ವಜ್ಞಾನಿ ಸರ್ವಜ್ಞ—
ತ್ರಿಪದಿ ಭಕ್ತಿಯೊಳು ಆತ್ಮ ನಿರ್ವಿಘ್ನ.
ಪುರಂದರದಾಸ-ಕನಕದಾಸ-ವಿಜಯದಾಸ—
ಭಕ್ತಿ ಪಥದಿ ಕರ್ನಾಟಕ ಸಂಗೀತ-ದಾಸ ಸಾಹಿತ್ಯ ಎಲ್ಲೆಡೆ ಪ್ರವಾಸ.
ಸಂತ ಶಿಶುನಾಳ ಶರೀಫ—
ಗುಡು ಗುಡಿಯ ಸೇದುವುದೇ ಭಕ್ತಿಯ ಆಲಾಪ.
ಕುವೆಂಪು-ಬೇಂದ್ರೆ-
ಕಾರಂತ-ಮಾಸ್ತಿ-
ಗೋಕಾಕ್-ಮೂರ್ತಿ-
ಕಾರ್ನಾಡ್-ಕಂಬಾರ—
೮ ದಿಕ್ಕಿನೊಳು ವಿಸ್ತಾರಗೊಂಡ ಕನ್ನಡ ಸಾಹಿತ್ಯದ ೮ ಶಿಖರ.
ಬೀಚಿ-ನರಸಿಂಹಸ್ವಾಮಿ—
ಹನಿಗವನವೇ ಪ್ರೇಮ ಧ್ವನಿ.
ಕೈಲಾಸಂ ಪ್ರಹಸನ ಪ್ರಪಿತಾಮಹ—
ನಗೆಹನಿಗಳ ಹಾಸ್ಯಮಯ ಪ್ರವಾಹ.
ಮಂಕುತಿಮ್ಮನ ಕಗ್ಗ—
ಪಾಂಚಜನ್ಯದ್ ಸಗ್ಗ.
ಶ್ರೀಕಂಠಯ್ಯ-ಅಡಿಗ—
ನವ ಕಾವ್ಯ ಅಲೆಯ ಪ್ರಯೋಗ.
ವಿ.ಸೀತಾರಾಮಯ್ಯ-ಎಂ.ವಿ.ಸೀತಾರಾಮಯ್ಯ—
ಸುಪ್ರಸಿದ್ದ ಗದ್ಯ-ಕವಿರಾಜಮಾರ್ಗ ಮರು ಪರಿಚಯ.
ಜೋಗಿ-ಲಂಕೇಶ—
ಪತ್ರಿಕೋದ್ಯಮ ಸಂತಸ.
ದೇವನೂರು ಮಹಾದೇವ—
ದಲಿತರ ಪಾಲಿನ ಸಾಹಿತ್ಯ ಭಾವ.
ಬೆಳಗೆರೆ-ಬೈರಪ್ಪ—
ಕಾದಂಬರಿ ಬರಹಗಳ ಜೇನುತುಪ್ಪ.
ತ್ರಿವೇಣಿ-ವೈದೇಹಿ-ವಾಣಿ—
ಮಹಿಳೆಯರಾಧಾರಿತ ಕಾದಂಬರಿಗಳ ತ್ರಿವಳಿ ಧ್ವನಿ.
ರಾಷ್ಟ್ರ ಕವಿ ಗೋವಿಂದ ಪೈ ರವರ ಬಹುಭಾಷ ವಿದ್ಯೆ—
ಸಾಹಿತ್ಯ ಸರಸ್ವತಿಗದುವೇ ನೈವೇದ್ಯೆ.
ಶಿವರುದ್ರಪ್ಪ-ನಿಸಾರ—
ಎದೆಯ ಹಾಡೇ ನಿತ್ಯೋತ್ಸವಾಗರ.
ರಾಜರತ್ನಂ-ತೇಜಸ್ವಿ—
ಮಕ್ಕಳೇ ಪ್ರಕೃತಿಯೊಳ ಚಿನ್ಮಯಿ.
ಲಕ್ಷ್ಮೀಶ-ಕಣವಿ—
ಜೈಮಿನಿ ಭಾರತದೊಳ್ ಚೆಂಬೆಳಕಿನ ಕವಿ.
ತರಾಸು-ಅನಕೃ—
ಕನ್ನಡ ಪ್ರಗತಿಶೀಲವೂ.
ಪುತಿನ-ಸುಬ್ಬಣ್ಣ—
ನವೋದಯ ನವ್ಯ ಕನ್ನಡಕ್ಕೆ ಮ್ಯಾಗ್ಸೆಸ್ಸೆ ಆಗಮನ.
ಸ್ವಾಮಿ-ಅಯ್ಯಂಗಾರ್-ವೆಂಕಟೇಶ್ ಮೂರ್ತಿ—
ಸಸ್ಯವಿಜ್ಞಾನ-ವ್ಯಂಗ್ಯ-ಭಾವಗೀತೆ ಸಾಹಿತ್ಯ ಸ್ಪೂರ್ತಿ.
ನಾಗರಾಜ್-ಬರಗೂರು-ಪಾಟೀಲ್-ಗೀತಾ-ಸಿದ್ದಲಿಂಗಯ್ಯ—
ಉದಯವಾಗಿ ಮೊಳಗಿತು ಬಂಡಾಯ ಸಾಹಿತ್ಯ.
ಜಿ.ಕೆ.ವೆಂಕಟೇಶ್-ಉದಯಶಂಕರ್-ಜಯಗೋಪಾಲ—
ಹಳೆಯ ಹಾಡುಗಳ ಭಾವ ಲೀಲಾಜಾಲ.
ಮನೋಮೂರ್ತಿ-ಕಲ್ಯಾಣ್-ಹಂಸಲೇಖ—
ಸಂಗೀತ-ಸಾಹಿತ್ಯಗಳ ನಾಕ.
ಭಟ್ಟರು-ಕಾಯ್ಕಿಣಿ—
ನಿರ್ದೇಶನ-ಸಾಹಿತ್ಯದ ಸಂಜೀವಿನಿ.
ಕಣ್ಣನ್-ಪ್ರಾಣೇಶ್-ಸುಧಾ ಬರಗೂರು—
ಹರಟೆ ಕಟ್ಟೆಯ ಹಾಸ್ಯ ಕಲಾವಿದರು.
ವಿಲಾಸ್ ನಾಯಕ—
ಏಷ್ಯಾದ ಅತೀ ವೇಗದ ವರ್ಣಚಿತ್ರಕಾರ-ಅಂತರಾಷ್ಟ್ರೀಯ ಮಟ್ಟದಿ ಚಿತ್ರಕಲಾ ಸಾಧಕ.
ಜಿ.ವಿ.ಅಯ್ಯರ್-ಎಸ್.ಸಿದ್ದಲಿಂಗಯ್ಯ-ದೊರೈ-ಭಗವಾನ—
ಕನ್ನಡದ್ ಭೀಷ್ಮ-ವಿಭಿನ್ನ ಚಲನಚಿತ್ರಗಳ ಉಗಮ.
ಪುಟ್ಟಣ್ಣ-ಶಂಕ್ರಣ್ಣ—
ಸಿನಿರಸಿಕರಿಗೌತಣ.
ಗಿರೀಶ್ ಕಾಸರವಳ್ಳಿ-ನಾಗತಿಹಳ್ಳಿ ಚಂದ್ರಶೇಖರ—
ಹೊಸ ಅಲೆ ಚಲನಚಿತ್ರಗಳು ಜಗದಿ ವಿಸ್ತಾರ.
ಉಪೇಂದ್ರ-ರಕ್ಷಿತ್-ರಿಷಭ್-ರಾಜ್-ಪವನ—
ಅಮೋಘ ನಿರ್ದೇಶನದಿ ಕನ್ನಡ ಪಾವನ.
ನರಸಿಂಹರಾಜು—
ಹಾಸ್ಯ ಚಕ್ರವರ್ತಿಯು.
ಲೋಕೇಶ್-ಶ್ರೀನಾಥ್-ಅನಂತ್ ನಾಗ್-ಅಂಬರೀಶ್-ವಿಷ್ಣುವರ್ಧನ್-ರಾಜಕುಮಾರ—
ನವರಸ ನಟನೆಯು ಅಜರಾಮರ.
ಮಾಲಾಶ್ರೀ-ಉಮಾಶ್ರೀ-ಲಕ್ಷ್ಮೀ-ಕಲ್ಪನಾ-ಮಂಜುಳ-ಭಾರತಿ-ಜಯಂತಿ-ಆರತಿ—
ಕನ್ನಡದ ಕಲಾ ಸರಸ್ವತಿಗಳಿಗೆ ಹೃದಯದಾರತಿ.
ಸಾಧುಕೋಕಿಲ-ಜಗ್ಗೇಶ—
ನವರಸ ಹಾಸ್ಯವು ಪ್ರಕಾಶ.
ರವಿಚಂದ್ರನ್-ಶಿವಣ್ಣ-ಸುದೀಪ್-ಪುನೀತ—
ಕ್ರಿಯಾಶೀಲ-ಸೃಜನಶೀಲ ಕಲೆಯು ಸದಾ ವಿನೀತ.
ಜೋಶಿ-ಗವಾಯಿ—
ಹಿಂದೂಸ್ತಾನಿಯು ಚಿರಸ್ಥಾಯಿ.
ಅನಂತಸ್ವಾಮಿ-ಅಶ್ವತ್ಥ—
ಸುಗಮ ಸಂಗೀತದ ಆದಿ ಪಥ.
ಜಾನಕಿ-ಚಿತ್ರ-ವಾಣಿ ಜಯರಾಮ—
ಕಂಠವೇ ಕೋಗಿಲೆಯ ಧಾಮ.
ಪಿ.ಬಿ.ಶ್ರೀ- ಎಸ್.ಪಿ.ಬಿ—
ಕೇಳುಗರೇ ಭಾಗ್ಯಶಾಲಿ.
ಪಲ್ಲವಿ-ರಾಜೇಶ್ ಕೃಷ್ಣನ್-ವಿಜಯಪ್ರಕಾಶ—
ಗಾಯನದಿ ಬದುಕು ವಿಕಾಸ.
ಯಕ್ಷಗಾನ-ಡೊಳ್ಳು ಕುಣಿತ—
ನಟರಾಜನ ಎದೆಯ ಬಡಿತ.
ಬೇಲೂರು-ಹಳೇಬೀಡು—
ಜಕಣ್ಣ-ಡಂಕಣ್ಣ ಶಿಲ್ಪಕಲೆ ಗೂಡು.
ಹಂಪಿ-ಬಾದಾಮಿ-ಐಹೊಳೆ—
ಶಿಲಾಕೃತಿಗಳ ಹೊನ್ನ ಮಳೆ.
ಸಹ್ಯಾದ್ರಿ-ಪಶ್ಚಿಮ ಘಟ್ಟಗಳ ಸಾಲು—
ಕರುನಾಡಿನ ಪಾಲಿಗೆ ಸ್ವರ್ಗದ ಮೆಟ್ಟಿಲು.
----ಚಿನ್ಮಯಿ