Saturday, July 31, 2021

ಪ್ರೇಮ ವಾಚನ

ನಿನ್ನ ನೋಡಿದೆ ಒಂದು ಸಂಜೆ,

ಜಾಗವೇನೋ ಊರ ಸಂತೆ.

ನನ್ನ ಚಿತ್ತವ ಸೆಳೆದೆ ನೀನು,

ಇಳೆಯು ರವಿಯ ಸುತ್ತುವಂತೆ.


ನಿನ್ನ ಹೆಜ್ಜೆಯ ಸೋಕಿದ ಕ್ಷಣ-

ಸುತ್ತಲೂ ಆವರಿಸಿತು ನಿಶೆ.

ನಿನ್ನ ಗೆಜ್ಜೆಯ ಸದ್ದಿನಿಂದಲೇ-

ಮೆಲ್ಲ-ಮೆಲ್ಲನೆ ಏರಿತು ನಶೆ.


ಹಿಂದೆ-ಹಿಂದೆಯೇ ಬಂದೆ ನಾ-

ತಿಳಿಯಲು ಮನೆ ವಿಳಾಸ.

ತಿಳಿದ ಮರುಕ್ಷಣದಿಂದಲೇ-

ಎದೆಯ ತುಂಬಾ ವಿಲಾಸ.


ಅಂದಿನಿಂದಲೇ ಶುರುವು-

ಮಾಡಿದೆ ಪ್ರೇಮ ವ್ಯವಸಾಯ.

ದಿನವೂ ನಿನದೆ ಗುಂಗಿನಲ್ಲಿ-

ಮುಳುಗಿ ಕಳೆದೆ ಸಮಯ.


ನಿನ್ನ ಕಂಡ ಹಳೆಯ ದಿನಗಳ-

ನಿನಗೇ ಹೇಳಿದೆ ಇಂದು.

ನಿನ್ನ ಎದುರೇ ನಿಂತು ಈಗ-

ಪ್ರೇಮವೇಳುವೆ ಕೇಳು. 


ಪ್ರೇಮವೇನೋ ರೇಸಿಮೆಯಂತೆ,

ನಾನೇ ಆಗುವೆ ರೇಸಿಮೆಯ ಧಾರ‌.

ಮಾಡಬಾರದೇ ನೀ ಕಸೂತಿಯ,

ಎನ್ನೆದೆಯಲಿ ಹೂಡಿ ಬಿಡಾರ!?

             ----ಚಿನ್ಮಯಿ

Friday, July 30, 2021

ಆತ್ಮ ಸಂಯಮ

ನಾಲಿಗೆ ತಿಳಿದರೂ ಬೇವು-ಬೆಲ್ಲದ ರುಚಿಯ,

ಸದಾ ಬಯಸುವುದು ಮಾತ್ರ ಬೆಲ್ಲದ ಸ್ನೇಹವ.

ಮನವೇ ಆದರೂ ನೋವು-ಸಂತಸದ ಒಡೆಯ,

ಸದಾ ಬಯಸುವುದು ಮಾತ್ರ ನೋವಿನ ಕ್ಷಣವ.


ನಾಲಿಗೆಗೆ ಕಹಿ ಬೇಡ, ಮನಕ್ಕೆ ಸಿಹಿ ಬೇಡ,

ಒಂದೇ ದೇಹದಲ್ಲಿದ್ದರೂ, ಇಬ್ಬರ ಬಯಕೆಯು ವಿರುದ್ಧ.

ಏತಕ್ಕೆ ಈ ರೀತಿ ಎಂಬುದಕ್ಕೆ ಉತ್ತರ ನಿಗೂಢ!

ನಿಗೂಢತೆಯ ಭೇದಿಸಲು ಆತ್ಮವಾಗಬೇಕು ಪರಿಶುದ್ಧ.

                          ----ಚಿನ್ಮಯಿ

Tuesday, July 13, 2021

ಶೂನ್ಯ <-> Nothingness

ನನಗೆ ತಿಳಿದಿರುವುದೊಂದೆ- 

" 'ನಾನು' ಶೂನ್ಯ" ವೆಂಬುದು.

            ----ಚಿನ್ಮಯಿ

All I know is-

" ' 'I' (is) am' Nothingness."

             ----chinmayi

        

Monday, July 12, 2021

ಬೀಸಣಿಗೆ

ಸೆಕೆಗಾಲದಿ ನನಗೂ-

ಪ್ರಕೃತಿಗೂ ಭಾರಿ ಕಾದಾಟ,

ರಾತ್ರಿ ಮಲಗಲಾಗದೆ-

ಬೈಯುತ ಗೊಣಗುತ ಒದ್ದಾಟ.


ತಂಪು ಗಾಳಿಯೊಡನೆ-

ಸರಸವಾಡಲಾಸೆ ಛಾವಣಿಗೆ,

ಮುನಿಸಿದ ಗಾಳಿಗೆ-

ಆತ್ಮೀಯ ಸ್ನೇಹಿತ ಬೀಸಣಿಗೆ.

         ----ಚಿನ್ಮಯಿ