Sunday, August 27, 2023

ದೀಪು— ನನ್ನ ಬಾಳಿನ ದೀಪ

ನಿನ್ನ ಕಾಡಿಗೆ ಕಪ್ಪು ಕಮಲದ ಕಾಂತಿ,

ಅದ ಕಾಣೋ ನನಗೆ ದೊರೆತಿದೆ ಶಾಂತಿ.

ನಿನ್ನಯ ನಿಷ್ಕಲ್ಮಶ ಹೃದಯದ ಒಡೆಯ—

ನಾನಾಗುತ ಸುರಿಸುವೆ ಪ್ರೇಮದ ಮಳೆಯ...

ಕೇಳೇ ಓ ನನ್ನ ಜೀವ.

ನೀನೇ ಈ ಹಾಡ ಭಾವ.


ಅದೆಷ್ಟು ಪುಣ್ಯ ಮಾಡಿದೆಯೋ ನನ್ನಯ ಕೈ ಬೆರಳು,

ಸ್ಪರ್ಶ ಸುಖ ಅನುಭವಿಸುವಾಗ ನಿನ್ನಯ ಮುಂಗುರುಳು.

ಚಂದ್ರನಂತೊಳೆವ ಮುಗುಳುನಗೆಯ ಆ ಸಿಹಿ ಕೆನ್ನೆಗೆ—

ಸೋತು ಶರಣಾಗಿ ಒಲವ ಸಹಿ ಹಾಕುವಾಸೆ ಈ ತುಂಟ ತುಟಿಗೆ...


ನಿನ್ನ ಮೈಯ ಹಚ್ಚೆಗಳಷ್ಟು ಪುಣ್ಯ ನನಗೆ ಸಾಕು,

ಆ ಬಿಸಿಯುಸಿರಲ್ಲಿಯೇ ಜೀವಿಸಲು ನನ್ನನ್ನು ನೂಕು!

ನಾಟ್ಯ ಸರಸ್ವತಿಯ ಒಲಿಸಿರುವ ನಾಟ್ಯಮಯೂರಿಯೇ—

ನನ್ನೆದೆಯ ಪ್ರೇಮ ಕವನವಿದೋ ಸ್ವೀಕರಿಸಿ ಕುಣಿಯೇ...!


ನಿನ್ನ ಸೆರಗ ದಾರಿ ಹಿಂಬಾಲಿಸೋ ಅಭ್ಯಾಸ,

ಇನ್ನೂ ಮುಂದೆ ನನಗೆ ಖಾಯಂ ಹವ್ಯಾಸ.

ಬಾಳ ದೀಪವೇ ನೀ ಪ್ರಕಾಶಿಸು ಸಾಕಷ್ಟೇ—

ನಿನಗಾಗಿಯೇ ಮುಡಿಪೆನ್ನ ಪ್ರೇಮ ನಿಷ್ಠೆ...

ಕೇಳೇ ಓ ನನ್ನ ಜಾನು.

ನೀನೇ ಈ ಬಾಳ ಜೇನು.


       ----ಚಿನ್ಮಯಿ

Monday, August 21, 2023

ನನ್ನವಳ ಪ್ರೇಮ ಬಾಣ

ಎನ್ನೆದೆಗೆ ಕಣ್ಣೆಂಬ ಬಿಲ್ಲಿಂದ ಪ್ರೀತಿಯ ಬಾಣವ ಹಾಕಿದವಳು ನೀನೆ...

ಆ ಬಾಣದ ನಿವಾಸ ಇನ್ನೆಂದೂ ಎನ್ನೆದೆಯೇ, ಆ ನೋವು ಸಿಹಿ ಜೇನೆ...

💘

                   ----ಚಿನ್ಮಯಿ

Thursday, August 17, 2023

ವಿಧಿಯಾಟ

ಬಾಳ ಗೆಳತಿಯೊಡನೆ ಸಪ್ತಸಾಗರದೊಳು ಕೈಯಿಡಿದು ಈಜುವಾಗ ರಕ್ಕಸ ಸುನಾಮಿಯೊಂದಪ್ಪಳಿಸಲು ಒಬ್ಬರಿಗೊಬ್ಬರು ಕಾಣಿಸಲಾಗದೆ ಸೇರಲಾಗದೆ ಇಬ್ಬರ ದಿಕ್ಕೇ ಬೇರೆ ಬೇರೆ ಆಯಿತು— ಬಹುಶಃ ವಿಧಿಯಾಟದನುಸಾರ ಅವಳ ತೀರ ಹಾಗೂ ನನ್ನ ತೀರ ಬೇರೆ ಬೇರೆ ಇರಬಹುದು...

                  ----ಚಿನ್ಮಯಿ

ತಿಳುವಳಿಕೆ

ತಿಳುವಳಿಕೆಯು ಮನಸ್ಸಿನಲ್ಲಷ್ಟೇ ಅಲ್ಲದೇ ಹೃದಯದಲ್ಲೂ ಹಾಗೂ ಮಾತಿನಲ್ಲೂ ನೆಲೆಸಿರಬೇಕು.

              ----ಚಿನ್ಮಯಿ