Saturday, May 9, 2020

ಎರಡನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ದೇವನೊಲಿಸುವ ಮಾರ್ಗ (ಭಕ್ತಿ ಗೀತೆ).
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).

ದೇವನೊಲಿಸುವ ಮಾರ್ಗವೂ ಸರಳ
ಅದಕ್ಕೇತಕೆ ತಕರಾರು ಗೆಳೆಯ!
ಮಾಡಬೇಕಿರುವ ಕೆಲಸವೂ ಬಹಳ
ಅದರಲ್ಲಿಯೇ ದೈವದ ನಿಲಯ. ||ಪ||

ಕಾಣದ ದೇವರಿಗಾಗಿ ಹುಡುಕಾಟ
ಕಾಣದಿದ್ದರೂ ಸುಮ್ಮನೆ ಪರದಾಟ.
ಬಿಡು ಇವೆಲ್ಲವ, ಕೇಳೊಮ್ಮೆ ಮನುಜ.
ನಮ್ಮೆಲ್ಲರ ಅಣು ಅಣುವೂ ಅವನೆ
ನಮ್ಮೊಳಗಿನ ಆತ್ಮವೂ ಪರಮಾತ್ಮನೆ
ಎಲ್ಲಾ ಜೀವರಾಶಿಯೂ ಮಾಧವನೆ. ||೧||

ಕಾಣದ ದೇವರಿಗಾಗಿ ನರಳಾಟ
ಕಂಡರೂ ಗುರುತಿಸದೆ ಒದ್ದಾಟ.
ಬಿಡು ಇವೆಲ್ಲವ, ಕೇಳೊಮ್ಮೆ ಮನುಜ.
ರೈತನ ಬೆವರಿನ ಹನಿಯೇ ಅವನು
ಬಡವನ ಹಸಿದ ಜಠರವೇ ಶಿವನು
ಬಾಯಾರಿದವನ ನಾಲಿಗೆಯೇ ಹರನು. ||೨||

ದೇವಸ್ಥಾನವೊಂದು ನೆಮ್ಮದಿಯ ಗೂಡು
ಗುಡಿಯಲ್ಲಷ್ಟೇ ದೇವರ ಹುಡುಕಿ ಆಗಬೇಡ ಕುರುಡು.
ಇದ ಅರಿತು, ಕೇಳೊಮ್ಮೆ ಮನುಜ.
ಮನೆಯೇ ದೇವಾಲಯದ ಸಂಕೇತವೋ
ಮನಸ್ಸಳೊಗೆ ದೈವದ ನಿವಾಸವೋ
ಅವನಿರದ ಜಾಗವೇ ಇಲ್ಲವೋ. ||೩||

ಪೂಜೆ ಪುನಸ್ಕಾರಗಳಷ್ಟೇ ಸಾಲದು
ಇರಬೇಕು ಅಂತರಂಗ ಶುದ್ಧತೆಗೆ ಒಲವು.
ಇದ ಅರಿತು, ಕೇಳೊಮ್ಮೆ ಮನುಜ.
ಭಿಕ್ಷುಕನ ಕೂಗಲ್ಲಿ ಇರುವರು ಹರಿಹರ
ಅಂತರಂಗ ಶುದ್ಧತೆಯೇ ಈಶ್ವರ
ಬಹಿರಂಗ ಶುದ್ಧತೆಯೇ ಪರಮೇಶ್ವರ. ||೪||
              ----ಚಿನ್ಮಯಿ

No comments:

Post a Comment